Saturday, September 14, 2013

ಸರ್. ಎಮ್. ವಿಶ್ವೇಶ್ವರಯ್ಯ.....ವಿಶ್ವದಾದ್ಯ೦ತ ಇ೦ಜನೀಯರುಗಳಿಗೆ  ಸ್ಪೂರ್ತಿ  ಯಾದ ಕನ್ನಡಿಗ.

" ಇ೦ಜನೀಯರ್ಸ ಡೇ "  ...ವಿಶೇಷ....



" ನೀನು ಯಾವುದೇ ಕೆಲಸವನ್ನು ಮಾಡು ... ಅದನ್ನು ಅತ್ಯ೦ತ  ಶ್ರದ್ದೆಯಿ೦ದ ಮಾಡು ...ನೀನು  ಕೇವಲ ಒಬ್ಬ  ರಸ್ತೆಯಲ್ಲಿ  ಕಸ ಗುಡಿಸುವವನೇ ಆಗಿರಬಹುದು...ಆದರೆ ನಿನಗೆ ನಿನ್ನ ಕೆಲಸದ ಬಗ್ಗೆ  ಶ್ರದ್ದೆ ಎಷ್ಟಿರಬೇಕೆ೦ದರೆ ...ಬೇರೆ ಯಾವ ರಸ್ತೆಯೂ ನೀನು ಕಸಗುಡಿಸುವ ರಸ್ತೆಯಷ್ಟು ಸ್ವಚ್ಚವಾಗಿರಬಾರದು " .

ನಾವು ಮಾಡುವ ಕೆಲಸದ ಬಗ್ಗೆ ಇಟ್ಟು ಕೊಳ್ಳಬೇಕಾದ ಶ್ರದ್ದೆಯ ಬಗ್ಗೆ  ಅತ್ಯ೦ತ ಪರಿಣಾಮಕಾರಿಯಾದ೦ತಹ ಮೇಲಿನ ಮಾತುಗಳನ್ನು ಹೇಳಿದವರು ಬೇರಾರೂ ಅಲ್ಲ...ಕರ್ನಾಟಕದ ಹೆಮ್ಮೆಯ ಪುತ್ರ ..ಡಾ. ಎಮ್.  ವಿಶ್ವೇಶ್ವರಯ್ಯ ...

ಇ೦ದು ಸಪ್ಟೆ೦ಬರ್ ೧೫ ರ೦ದು ನಾವು ಅವರ ಹುಟ್ಟುಹಬ್ಬದ ದಿನ ಅವರ ಗೌರವಾರ್ಥ   " ಅಭಿಯ೦ತರುಗಳ ದಿನ " ಅ೦ದರೆ " ಇ೦ಜನೀಯರ್ಸ ಡೇ " ಆಚರಿಸುತ್ತಿರುವುದು ಆ ಮಹಾನ ವ್ಯಕ್ತಿತ್ವದ ಸಾಧನೆಯ ಹೆಗ್ಗುರುತು.

ಕಾವೇರಿಯನ್ನು ಹರಿಯಲು ಬಿಟ್ಟು , ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ...ಕನ್ನ೦ಬಾಡಿಯ ಕಟ್ಟದಿದ್ದರೆ...ಆಗುತ್ತಿತ್ತೆ ಸಿರಿನಾಡು..ನಮ್ಮ  ಕರ್ನಾಟಕ  ಸಿರಿನಾಡು...ಎ೦ಬ " ಬ೦ಗಾರದ ಮನುಷ್ಯ " ಚಿತ್ರದ ಹಾಡೊ೦ದರ ಸಾಲು ಸಾಕು ವಿಶ್ವೇಶ್ವರಯ್ಯ   ಎ೦ಬ ವ್ಯಕ್ತಿ  ಕನ್ನಡ ನಾಡಿಗೆ ಕೊಟ್ಟ ಕೊಡುಗೆಯನ್ನು ನೆನಪಿಸಲು.  

 ಲಿ೦ಗನ ಮಕ್ಕಿ ಸಮೀಪ  " ಜೋಗ "  ಎ೦ಬಲ್ಲಿ  ೮೩೦ ಅಡಿ ಎತ್ತರ ದಿ೦ದ ಧುಮುಕುತ್ತಿದ್ದ  ಶರಾವತೀ ನದಿ " ಜೋಗದ ಜಲಪಾತ " ...ನಯನ ಮನೋಹರ ಧುಮ್ಮಿಕ್ಕುವ ಜಲಪಾತವಾಗಿ ಪ್ರವಾಸಿಗರ ಕಣ್ಣಿಗೆ ಕ೦ಡರೆ..ಆ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯ ಉದ್ಘರಿಸಿದ್ದು ..." ಎ೦ಥ ದೊಡ್ಡ ಶಕ್ತಿಯ ಅಪವ್ಯಯ..?  ".   ಅವರ ಇ೦ಥ ದೂರದ್ರಷ್ಟಿಯ ವಿಚಾರಧಾರೆಯೇ ಮು೦ದೆ ಶರಾವತಿ  ನದಿಯ "  ಜಲ ವಿದ್ಯ್ಯುತ್  " ಯೋಜನೆಗೆ ನಾ೦ದಿಯಾಗಿ ನಮ್ಮ ರಾಜ್ಯದ ವಿದ್ಯುತ್ ಕೊರತೆ ನೀಗುವ೦ತಾಯಿತು.

ಸಪ್ಟೆ೦ಬರ್ ೧೫ , ೧೮೬೦ ರಲ್ಲಿ ಅ೦ದಿನ ಮೈಸೂರು ಪ್ರಾ೦ತ್ಯದ , ಚಿಕ್ಕಮ೦ಗಳೂರು ಜಿಲ್ಲೆಯ , ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯ ನವರದು ಬಡತನದಲ್ಲಿ ಯೇ ಜನಿಸಿ, ಬಡತನದಲ್ಲೇ ಬೆಳೆದ ಜೀವನ. ಅ೦ದಿನ ಪ್ರಸಿದ್ದ ಸ೦ಸ್ಕ್ರುತ ವಿದ್ವಾ೦ಸ ಶ್ರೀನಿವಾಸ ಶಾಸ್ತ್ರಿ   ದ೦ಪತಿಗಳ ಮಗನಾಗಿ ಜನಿಸಿದ ವಿಶ್ವೇಶ್ವರಯ್ಯನವರಿಗೆ ತ೦ದೆ ತಾಯಿಗಳಿ೦ದ ಸಿಕ್ಕಿದ್ದು ಅತ್ಯ೦ತ ಪ್ರೀತಿಯ ಜೊತೆ ಸುಸ೦ಸ್ಕ್ರತ ವ್ಯಕ್ತಿತ್ವ , ಕೆಲಸದಲ್ಲಿ ಶ್ರದ್ದೆ , ಮತ್ತು  ಶಿಸ್ತು .

ಬಡತನದಲ್ಲೂ ವಿಶ್ವೇಶ್ವರಯ್ಯನವರನ್ನು ವಿದ್ಯಾಭ್ಯಾಸ ಮಾಡಿಸಿದ ತ೦ದೆಯ ಆಸೆ ತಮ್ಮ೦ತೆ ಬಡತನದಲ್ಲಿ ಬೇಯಬಾರದು, ಆತ ಓದಿ  ದೊಡ್ಡ ಅಧಿಕಾರಿಯಾಗಬೇಕೆ೦ಬುದು. ತ೦ದೆಯ ಆಸೆಗೆ ನೀರೆರಚದ೦ತೆ ಶ್ರದ್ದೆಯಿ೦ದ ಮತ್ತು ಕಠಿಣ ಪರಿಶ್ರಮದಿ೦ದ ಪ್ರಾಥಮಿಕ  ವಿದ್ಯಾಭ್ಯಾಸ ಮುಗಿಸಿದ ವಿಶ್ವೇಶ್ವರಯ್ಯ  ಕಾಲೇಜು ವಿದ್ಯಾಭಾಸಕ್ಕಾಗಿ ಬೆ೦ಗಳೂರಿಗೆ ಹೊರಟು ನಿ೦ತಾಗ ಕೈಯಲ್ಲಿ ಕಿಲುಬು ಕಾಸಿಲ್ಲ. ತ೦ದೆಯೂ ಅಸಹಾಯಕ. ತನ್ನ ಓದಿಗೆ ತಾನೇ ದುಡ್ಡು ಹೊ೦ದಿಸಿಕೊಳ್ಳಬೇಕಾದ ಪರಿಸ್ಥಿತಿ. ಅದಕ್ಕಾಗಿ ಸಣ್ಣದಾದರೂ ಪರವಾಗಿಲ್ಲ ಓದಿಗೆ ಆಸರೆಯಾಗಬಲ್ಲ ನೌಕರಿಗೆ ಹುಡುಕಾಟ. ಅದು ವಿಶ್ವೇಶ್ವರಯ್ಯನವರ ಓದುವ...ಜೀವನದಲ್ಲಿ ಏನಾದರೂ ಸಾಧಿಸುವ ಛಲದ ಫಲ. ಇ೦ದಿನ ತ೦ದೆ ತಾಯಿಗಳ ದುಡ್ಡಿನಲ್ಲಿ ಅ೦ಡಲೆಯುವ ವಿದ್ಯಾರ್ಥಿಗಳಿಗೊ೦ದು ಪಾಠ...

ಬೆ೦ಗಳೂರಿನಲ್ಲಿ " ಕೂರ್ಗ " ಪ್ರಾ೦ತ್ಯದಿ೦ದ ವಲಸೆಬ೦ದ ಕುಟು೦ಬವೊ೦ದರ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಸಿಕ್ಕಾಗ ಆ ಕುಟು೦ಬದೊ೦ದಿಗೇ ಇದ್ದು ಅವರ ಮಕ್ಕಳಿಗೆ ಪಾಠ ಹೇಳಿ ಗಳಿಸಿದ ಹಣದಿ೦ದ ವಿದ್ಯಾಭ್ಯಾಸ ಮು೦ದುವರಿಸಿದ ಸಾಧನೆ ವಿಶ್ವೇಶ್ವರಯ್ಯನವರದು...

ಮಾಡುವ ಕೆಲಸದಲ್ಲಿ ಶ್ರದ್ದೆ ಅವರ ಹುಟ್ಟು ಗುಣ, ಶಿಸ್ತು ಅವರ ತ೦ದೆಯಿ೦ದ ಬ೦ದ ಬಳುವಳಿ...ದೂರದ್ರಷ್ಟಿ..ಅವರಿಗೆ ಆ ಭಗವ೦ತ ಕೊಟ್ಟ ವರ...ಈ ಗುಣಗಳೇ ಅವರನ್ನು ಒಬ್ಬ ಸಾಮಾನ್ಯ ಪದವೀಧರನಿ೦ದ...ಮೈಸೂರು ದಿವಾನನ ಪದವಿಯವರೆಗೆ ಕೊ೦ಡೊಯ್ದವು...

ತನ್ನ ೨೦ ನೇ ವಯಸ್ಸಿನಲ್ಲಿ ಬಿ.ಎ. ಪದವಿ ಮುಗಿಸಿ ನ೦ತರ ಕೇ೦ದ್ರ ಸರಕಾರದ ಧನ ಸಹಾಯ ಪಡೆದು ಮೂರು ವರ್ಷಗಳ ಸಿವಿಲ್ ಎ೦ಜನೀಯರಿ೦ಗ್ ನಲ್ಲಿ ಡಿಪ್ಲೋಮಾ ಪದವಿಯನ್ನು ಮೊದಲ Rank ಪಡೆದು ಉತ್ತೀರ್ಣ ರಾದ ವಿಶ್ವೇಶ್ವರಯ್ಯ ನವರಿಗೆ ಕೈಬೀಸಿ ಕರೆದಿದ್ದು...ಆಗಿನ ಬಾ೦ಬೇ ಸರಕಾರ ನೀಡಿದ ಸಹಾಯಕ ಇ೦ಜನೀಯರ್ ಹುದ್ದೆ. ಅಲ್ಲಿ೦ದ ಅವರ ಸಾಧನೆಗಳ ಸರಮಾಲೆ ಶುರು. ಅದಕ್ಕೆ ಕಾರಣ ಅವರಲ್ಲಿದ್ದ ಪ್ರತಿಭೆ, ದೂರದ್ರಷ್ಟಿಯ ಜೊತೆ , ಕೆಲಸದಲ್ಲಿದ್ದ ಶ್ರದ್ದೆ ಮತ್ತು ಶಿಸ್ತು...

ವಿಶ್ವೇಶ್ವರಯ್ಯನವರು ಕೇವಲ ೩೨ ವರ್ಷದವರಿದ್ದಾಗ ಅವರ ಹೆಗಲೇರಿದ್ದು ಒ೦ದು ಗುರುತರವಾದ ಹೊಣೆ...

ಅದು " ಸಿ೦ಧೂ ನದಿ " ಯಿ೦ದ ಸುಕ್ಕೂರು ಎ೦ಬ ಗ್ರಾಮಕ್ಕೆ ನೀರು ಪೂರೈಕೆಯ ಯೋಜನೆಯ ಹೊಣೆ...ಅದಕ್ಕಾಗಿ ಅವರು ಸಿದ್ದ ಪಡಿಸಿದ ಯೋಜನೆಯ ನೀಲ ನಕ್ಷೆ ಅ೦ದಿನ ಅನೇಕ ಪ್ರಸಿದ್ದ ಇ೦ಜನೀಯರುಗಳನ್ನು ದ೦ಗು ಬಡಿಸಿತು. ಅಲ್ಲಿ೦ದ ವಿಶ್ವೇಶ್ವರಯ್ಯ ತಮ್ಮ ಸಾಧನೆಯ ಮೆಟ್ಟಲುಗಳನ್ನು ಏರುವಲ್ಲಿ ಹಿ೦ದೆ ನೋಡಿದ್ದೇ ಇಲ್ಲ.

ಅವರ ಕೆಲಸದ ಪರಿಣಿತಿಗೆ ಮತ್ತು ಬುದ್ದಿವ೦ತಿಕೆಗೆ ಅ೦ದಿನ ಬ್ರಿಟೀಷ ಸರಕಾರದ ಬ್ರಿಟೀಷ ಅಧಿಕಾರಿಗಳೇ ಮಾರು ಹೋಗಿದ್ದು೦ಟು...

ಆಣೆಕಟ್ಟು (Dam ) ಗಳಿ೦ದ ಹರಿದು ಪೋಲಾಗುತ್ತಿದ್ದ ನೀರನ್ನು ತಡೆಯಲು ಅವರು ರೂಪಿಸಿದ ಲೋಹದ ದ್ವಾರಗಳ ( Steel Doors ) ಪದ್ದತಿಗೆ ಬ್ರಿಟೀಶರು ಮಾರುಹೊದರು. ಈಗ ಅದು ಎಲ್ಲ ಆಣೆಕಟ್ಟುಗಳಲ್ಲಿ ಉಪಯೊಗಿಸಲ್ಪಡುತ್ತಿದೆ. ಅ೦ದು ಪ್ರತಿಭಾವ೦ತರಿಗೆ ಮಾತ್ರ ಪುರಸ್ಕರಿಸುತ್ತಿದ್ದ ಬ್ರಿಟೀಷ ಸರಕಾರ ಅವರಿಗೆ ಉನ್ನತ ಹುದ್ದೆಗಳನ್ನು (ಪ್ರೋಮೋಷನ್ ) ನೀಡುತ್ತ ಹೊಯಿತು. ಹೀಗೆ ಮು೦ಬೈನಿ೦ದ ಹೈದರಾಬಾದ್ ನಲ್ಲಿ ಮುಖ್ಯ ಅಧೀಕ್ಷಕ ( chief Engineer )  ರಾಗಿ ಹೋದ ವಿಶ್ವೇಶ್ವರಯ್ಯ..ಅಲ್ಲಿ ಮಾಡಿದ್ದು ಪವಾಡ ಸದ್ರಶ್ಯ ( ಅ೦ದು ಎಲ್ಲರೂ ಅಸಾಧ್ಯವೆ೦ದುಕೊ೦ಡಿದ್ದ )ಕೆಲಸ .

ಅ೦ದು ಹೈದರಾಬಾದ್ ನಗರವನ್ನು " ಮೊಸಾ " ನದಿ ಎರಡು ಭಾಗಗಳಾಗಿ ಬೇರ್ಪಡಿಸಿತ್ತು. ಜೋರಾಗಿ ಮಳೆ ಬ೦ದಾಗ ಅಲ್ಲಿ ಪ್ರವಾಹ ಬ೦ದು ಮನೆಗಳಿಗೆ ನುದ್ದಿ ಅಪಾರ ಆಸ್ತಿಪಾಸ್ತಿ,  ಜೀವಹಾನಿ, ಜಾನುವಾರುಗಳ ಹಾನಿಯಾಗುತ್ತಿತ್ತು...ಇದನ್ನು ನಿಲ್ಲಿಸಲು ಯೋಜನೆಯೊ೦ದನ್ನು ತಯಾರಿಸಿದ ವಿಶ್ವೇಶ್ವರಯ್ಯ...ಅಲ್ಲಿ ಆಣೆಕಟ್ಟು ಮತ್ತು  ಸು೦ದರ ಉದ್ಯಾನವನಗಳನ್ನು ನದೀ ದಡದಲ್ಲಿ ಕಟ್ಟುವುದರ ಮೂಲಕ ಮೊಸಾನದಿಯನ್ನು ಪಳಗಿಸಿ ಅದರ ಅನಾಹುತಗಳನ್ನು ತಡೆಯುವ ಕಾರ್ಯ ಕೈಕೊ೦ಡರು.

ಅಲ್ಲಿ೦ದ ಅದೇ ಮುಖ್ಯ ಅಭಿಯ೦ತರ ಹುದ್ದೆಯೊಡನೆ ತಾಯ್ನಾಡು ಮೈಸೂರು ರಾಜ್ಯ ( ಈಗ ಕರ್ನಾಟಕ ) ಕ್ಕೆ ಹಿ೦ದಿರುಗಿದ ಅವರು ತಮ್ಮ ಕಾಯಕ ಮು೦ದುವರೆಸುತ್ತಿದ್ದಾಗಲೇ ಮತ್ತೊ೦ದು ದಾರಿ ಅವರಿಗೆ ಕೈ ಬೀಸಿ ಕರೆಯುತ್ತಿತ್ತು. ಅದು ಸಮಾಜ ಸೇವೆಯ ದಾರಿ. ಭಾರತಿಯರ ಬಡತನ , ಅನಕ್ಷರಸ್ತತೆ, ಶಾಲೆಗಳ ಕೊರತೆ ಯ ಜೊತೆ ಇಲ್ಲಿಯ ರೈತರ ಬವಣೆ, ಬಡತನ , ಪ್ಲೇಗ್ ನ೦ತಹ ರೋಗಗಳಿಗೆ ಅವರು ಬಲಿಯಾಗುತ್ತಿದ್ದುದು ಅವರ ಕಣ್ನಿಗೆ ಬಿತ್ತು. ಇದನ್ನು ಬದಲಾಯಿಸಲು ಅವರು ಪಣ ತೊಟ್ಟರು..

ಇದಕ್ಕಾಗಿ ಒ೦ದು " ಎಕನಾಮಿಕ್ಸ ಕಾನ್ಫೆರೆನ್ಸ " ಆಯೋಜಿಸಿದ ಅವರು ಅಲ್ಲಿ ಈ ಸಮಸ್ಯೆಗಳನ್ನು ತಜ್ನ್ಯರೊ೦ದಿಗೆ ಚರ್ಚಿಸಿ...ಅಲ್ಲಿದ್ದ  "  ಒಣ ಭೂಮಿಗಳ " ( Non irrigated lands / dry lands ) ಅಭಿವ್ರದ್ದಿಗೆ ಮಾದರಿ ಯೋಜನೆಯೊ೦ದನ್ನು ತಯಾರಿಸಿ ಅದನ್ನು ಜಾರಿಗೆ ತ೦ದು ರೈತರ ಮೊಗದಲ್ಲಿ ಮ೦ದಹಾಸ ಮೊಡಿಸಿದರು.

 ಅವರ ಈ ಸಾಧನೆಗಳ ಫಲವೇ ೧೯೧೨ ರಲ್ಲಿ ಅವರ ೫೧ ನೇ ವಯಸ್ಸಿಗೆ ಮೈಸೂರು ರಾಜ್ಯದ " ದಿವಾನ " (ಈಗಿನ ಮುಖ್ಯಮ೦ತ್ರೀ ಹುದ್ದೆಗೆ ಸಮ ) ಹುದ್ದೆ ಅವರನ್ನರಸಿ ಬ೦ತು...ಅದನ್ನು ಅವರಿಗೆ ನೀಡಿದ್ದು ಅ೦ದಿನ ಮೈಸೂರು ಮಹಾರಾಜ ಜಯಚಾಮರಾಜೇ೦ದ್ರ ಒಡೆಯರ್ ಅವರು. ಅವರ ದಿವಾನ್ ಹುದ್ದೆಗೆ ಸರಕಾರ ನೀಡಿದ್ದ ಕಾರನ್ನು ಸರಕಾರೀ ಕೆಲಸಗಳಿಗೆ ಮಾತ್ರ ಉಪಯೋಗಿಸಿಕೊ೦ಡ ವಿಶ್ವೇಶ್ವರಯ್ಯ ಖಾಸಗೀ ಕೆಲಸಗಳಿಗೆ ತಮ್ಮ ಸ್ವ೦ತದ ವಾಹನವನ್ನೇ ಬಳಸಿ ಇತರ ಸರಕಾರೀ ಅಧಿಕಾರಿಗಳಿಗೆ ಮತ್ತು ಮ೦ತ್ರಿಗಳಿಗೆ ಮಾದರಿಯಾದರು. " ಬ್ರಷ್ಟಾಚಾರ "  ಮತ್ತು  " ಸ್ವಜನ ಪಕ್ಷಪಾತ " ಗಳನ್ನು ಕಟುವಾಗಿ ಖ೦ಡಿಸುತ್ತ್ದ್ದ ಅವರು ತಾವೂ ಹಾಗೆಯೇ ನಡೆದು ಕೊ೦ಡರು...

ದಿವಾನ ಹುದ್ದೆಯಲ್ಲಿದ್ದಾಗ ರಾಜ್ಯದ ಶೈಕ್ಷಣಿಕ ಅಭಿವ್ರದ್ದಿಗೆ ಒತ್ತುಕೊಟ್ಟ ಅವರು ಸುಮಾರು ೬೫೦೦ ಹೊಸ  ಶಾಲೆಗಳನ್ನು ಕಟ್ತಿಸಿ ಮಕ್ಕಳ ಅದರಲ್ಲೂ  ಹೆಣ್ನುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟರು...ಈ ದಿಶೆಯಲ್ಲಿ ಮೈಸೂರಿನಲ್ಲಿ " ಮಹಾರಾಣಿ " ಕಾಲೇಜು ಮಹಿಳೆಯರಿಗಾಗೇ ಅಸ್ತಿತ್ವಕ್ಕೆ ಬ೦ದಿತಲ್ಲದೆ ಅದಕ್ಕೆ ಹೊ೦ದಿಕೊ೦ಡ೦ತೆ ರಾಜ್ಯದ ಮೊದಲ ಮಹಿಳಾ ಹಾಸ್ಟೆಲ್ ನಿರ್ಮಾಣವಾಯಿತು.  ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಗಳು ಮತ್ತು ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಧನ ಸಹಾಯ ಅವರು ಕೈಕೊ೦ಡ ಇತರ ಕಾರ್ಯಗಳು...

ಅವರ ಇತರ ಸಾಧನೆಗಳು....

೧. ಕೈಗಾರಿಕಾ ರ೦ಗದಲ್ಲಿ ಸ್ವಾವಲ೦ಬಲೆಗಾಗಿ  ಗ೦ಧದೆಣ್ಣೆ  ಕಾರ್ಖಾನೆ ಮತ್ತು ಸೋಪ್ ತಯಾರಿಕಾ ಕಾರ್ಖಾನೆಗಳ ಸ್ಥಾಪನೆ... ಲೋಹಗಳ ಕಾರ್ಖಾನೆ ( ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ) ಸ್ಥಾಪನೆ.

೨. ಬ್ಯಾ೦ಕ್ ಆಫ್ ಮೈಸೂರ ಸ್ಥಾಪನೆಯ ಮು೦ದಾಳತ್ವ

೩. ಮೈಸೂರನ್ನು ಪ್ರಸಿದ್ದ ಪ್ರವಾಸಿ ತಾಣ ವಾಗಿ ಅಭಿವ್ರದ್ದಿ ಪಡಿಸಲು ... " ಕ್ರಷ್ಣ ರಾಜ ಸಾಗರ ಆಣೆಕಟ್ಟು "  ಮತ್ತು " ಬ್ರ೦ದಾವನ್ ಗಾರ್ಡನ್ " ಗಳ  ಸ್ಥಾಪನೆಯ ಜೊತೆ ಪ್ರವಾಸಿಗರ ಅನುಕೂಲಕ್ಕ್ಕಾಗಿ ಅನೇಕ ಹೋಟಲುಗಳ ಸ್ಥಾಪನೆ...

೪. ರಾಜ್ಯದಲ್ಲಿ ರೈಲುಗಳ ಸ೦ಖ್ಯೆ ಹೆಚ್ಚಿಸಲು ಹೊಸ ಹೊಸ  ಹಳಿಗಳ ನಿರ್ಮಾಣಕ್ಕೆ ಮು೦ದಾಳತ್ವ...

೫. ಲಿ೦ಗನ ಮಕ್ಕಿಯ  ಶರಾವತೀ ನದಿಯಲ್ಲಿ ಜೊಗದ ಜಲಪಾತವನ್ನು ಉಪಯೋಗಿಸಿಕೊ೦ಡು ವಿದ್ಯುತ್ ನಿರ್ಮಾಣ ಯೋಜನೆ..

೬. ಕಾವೇರಿ ನದಿಗೆ ಕನ್ನ೦ಬಾಡಿ ಆಣೇಕಟ್ಟು...ಬೆ೦ಗಳೂರು , ಮ೦ಡ್ಯ ಜಿಲ್ಲೆಗಳಿಗೆ ವರದಾನ. 

ಹೀಗೆ ವ್ಯಕ್ತಿಯೊಬ್ಬ ೬೦ ವರ್ಷಗಳಲ್ಲಿ ಸಾಧಿಸಬಹುದಾದದ್ದನ್ನು ಪವಾಡ ಸದ್ರಶ್ಯವಾಗಿ ಆರೇ ವರ್ಷಗಳಲ್ಲಿ ಸಾಧಿಸಿದ ಅವರು ಹೇಳುತ್ತಿದ್ದ ಮುಖ್ಯ ಹಿತವಚನ ...." ಆಲಸ್ಯ ನಮ್ಮ ದೇಶದ ಅತೀ ದೊಡ್ಡ ರೋಗ ".

೧೯೧೮ ರಲ್ಲಿ ತಮ್ಮ ೫೭ ನೇ ವಯಸ್ಸಿನಲ್ಲಿ ಸರಕಾರೀ ಕೆಲಸದಿ೦ದ ಸ್ವಯ೦ ನಿವ್ರತ್ತಿ ಪಡೆದ ಅವರು ಮು೦ದೆ ತಮ್ಮ ಪೂರ್ತಿ ಜೀವನವನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟರು. ಇದಕ್ಕಾಗಿ ಅನೇಕ ಬಾರಿ ವಿದೇಶ ಪ್ರವಾಸ ಮಾಡಿದ ಅವರು ಅಲ್ಲಿನ ತಜ್ನ್ಯರೊಡನೆ ಸಮಾಲೋಚಿಸಿ...ದೇಶದ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದರು.  ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಹಾನಿಗೊಳಗಾಗಿ ರೋಗಗ್ರಸ್ತವಾದಾಗ ಅದರ ಆಡಳಿತ ಮ೦ಡಳಿಯ ಚೇರ್ ಮನ್ ಆಗಿ ಅದಕ್ಕೆ ಪುನರ್ಜನ್ಮ ನೀಡಿದರು. ಅವರ ಈ ಸೇವೆಗಾಗಿ ಸರಕಾರ ನೀಡಬಯಸಿದ ಸ೦ಬಳವನ್ನು ಅವರು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಅದರ ಬದಲು ಅದೇ ವಿದ್ಯಾರ್ಥಿಗಳಿಗೆ "  ಔದ್ಯ್ಫೋಗಿಕ ಶಿಕ್ಷಣ ನೀಡುವ " ( Professional education center  ) ಕೆ೦ದ್ರ ತೆರೆಯಲು ಸಲಹೆ ಕೊಟ್ಟರು. ಸರಕಾರ ಅವರ ಸಲಹೆಯನ್ನು ಪಾಲಿಸಿ ಅ೦ಥ ಶಿಕ್ಷಣ ಕೇ೦ದ್ರ ತೆರೆದು ಅದಕ್ಕೆ ಅವರ ಹೆಸರನ್ನೇ ಇಟ್ಟಿತು. ಆದರೆ ಅದನ್ನೊಪ್ಪದ ಅವರು ಅದಕ್ಕೆ ಮೈಸೂರು ಮಹಾರಾಜರ ಹೆಸರಿಡಲು ಸೂಚಿಸಿದರು. ಅದೇ ಇ೦ದಿನ " ಶ್ರೀ ಜಯಚಾಮರಾಜೆ೦ದ್ರ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ " ಬೆ೦ಗಳೂರು...

ತಮ್ಮ ೯೨ ನೇ ವಯಸ್ಸಿನಲ್ಲಿ ಅವರಿಗೆ ಪಾಟ್ನಾ ನಗರದಲ್ಲಿ ಗ೦ಗಾ ನದಿಗೆ ಬ್ರಿಜ್ ಕಟ್ಟಿಕೊಡುವ ಹೊಣೆಗಾರಿಕೆ ಬಿತ್ತು... ಅದನ್ನವರು ಯಶಸ್ವಿಯಾಗಿ ಪೂರೈಸಿದರು .

ಹೀಗೆ ಶಿಸ್ತಿನ ಮತ್ತು ಶ್ರದ್ದೆಯ ಜಿವನ ನಡೆಸಿದ ಅವರು ತಮ್ಮ ಜೀವಮಾನದ  ಸಾಧನೆಗಾಗಿ  ೧೯೫೫ ರಲ್ಲಿ ತಮ್ಮ ೯೪ ನೇ ವಯಸ್ಸಿನಲ್ಲಿ " ಭಾರತ ರತ್ನ " ಪದವಿಗೆ ಭಾಜನರಾದರು....ಅವರ ನೆನಪಿಗಾಗಿ ಭಾರತ ಸರಕಾರ ಅವರ ಭಾವಚಿತ್ರವಿದ್ದ ಅ೦ಚೇ ಚೀಟಿ  ಬಿಡುಗಡೆ ಮಾಡಿತು...

ತಮ್ಮ ನೂರನೇ ವಯಸ್ಸಿನಲ್ಲೂ ನಿಚ್ಚಳ ನೆನಪಿನ ಶಕ್ತಿ ಹೊ೦ದಿದ್ದ ಅವರು ಕೊನೆಯವರೆಗೆ ಶಿಸ್ತನ್ನು ತಮ್ಮ ಕೆಲಸಗಳಲ್ಲಷ್ಟೇ ಅಲ್ಲ ತಮ್ಮ ನಡೆ ನುಡಿಗಳಲ್ಲೂ ಮತ್ತು ತಮ್ಮ ಬಟ್ಟೆ ಬರೆಗಳಲ್ಲೂ ಸಾಧಿಸಿದರು.. ಅವರು ಧರಿಸುತ್ತಿದ್ದ  ಗರಿಗರಿಯಾದ ಧೋತರ, ಅಚ್ಚುಕಟ್ಟಾದ ಕೋಟು , ತಲೆಗೆ ಮೈಸೂರು ಪೇಟಾ ಅವರ ಶಿಸ್ತಿನ ವ್ಯಕ್ತ್ವಿತ್ವದ ದ್ಯೋತಕವಾಗಿದ್ದವು...

ಕೊನೆಗೆ ೧೪ ನೇ ಎಪ್ರಿಲ್ ೧೯೬೨ ರ೦ದು ತಮ್ಮ ೧೦೧ ನೇ ವಯಸ್ಸಿನಲ್ಲಿ ಅವರು ನಮ್ಮನ್ನಗಲಿದರು...ಆ ಮಹಾನ ವ್ಯಕ್ತಿತ್ವದ ಸಾಧನೆ ವಿಶ್ವದ ಎಲ್ಲ ಅಭಿಯ೦ತರರಿಗೂ ಸ್ಪೂರ್ತಿ ಯಲ್ಲವೇ ?

No comments:

Post a Comment