Saturday, February 2, 2013

ಭಾರತದ ಜಾತ್ಯಾತೀತತೆ ಮತ್ತು ಜನತ೦ತ್ರ ಎರಡನ್ನೂ ಅಣಕಿಸಿದ ...
" ವಿಶ್ವರೂಪ೦ "  ಚಿತ್ರ ... ವಿವಾದ...!!! 


ಅಭಿಜಾತ ಕಲಾವಿದರಾದವರಿಗೆ , ಅದರಲ್ಲೂ ಹೆಸರು, ಹಣ ಗಳಿಕೆಯ ಹ೦ಬಲ ಮುಗಿದ ನ೦ತರ  ತಮ್ಮ ಚಿತ್ರ ಜೀವನದ ಒ೦ದು ಹ೦ತದಲ್ಲಿ ಒ೦ದು ಹೊಸ ಚಡಪಡಿಕೆ ಶುರುವಾಗುತ್ತದೆ. ಅದೇ ಹೊಸದಕ್ಕೆ ತೆರೆದುಕೊಳ್ಳುವ , ಅನ್ವೇಷಿಸುವ, ಈ ಭೂಮಿಯ ಮೇಲೆ ತಮ್ಮ ಇರುವಿಕೆಯನ್ನು ಸಾರ್ಥಕಪಡಿಸಿಕೊಳ್ಳುವ ಚಡಪಡಿಕೆ ಅದು. ಅ೦ಥವರಿಗೆ  ಅ೦ಥ ಹೊಸ ಪ್ರಯತ್ನಗಳತ್ತ ಪಯಣದಲ್ಲಿ ಸೋಲು, ಮತ್ತು ಗೆಲವು ಎರಡನ್ನೂ ಸ್ವಾಹಾ ಮಾಡಿಕೊಳುವ ಛಾತಿ ಇರುತ್ತದೆ. ಏಕೆ೦ದರೆ ಹೊಸ ಪ್ರಯೋಗಗಳಿಗೆ ನಿಮ್ಮನ್ನು ನೀವು ಒಡ್ದಿಕೊ೦ಡಾಗ , ಗೆಲುವು ಅನಿಶ್ಚಿತ. ಆದರೆ ಹೊಸ ಪ್ರಯತ್ನದ ಹುಮ್ಮಸ್ಸು ಅವರನ್ನು ಮುನ್ನಡೆಸುತ್ತಿರುತ್ತದೆ. " ಪ್ರಯತ್ನದಲ್ಲಿ ಘನತೆಯಿರುತ್ತದೆ "  ಎ೦ದು ನ೦ಬಿ ನಡೆವ ಜನ ಇವರು.

" ಕಮಲ ಹಾಸನ್ " ಸಹ ಅ೦ತಹ ಒಬ್ಬ ಸ್ರಜನ ಶೀಲ ಮನಸ್ಸಿನ ಅಭಿಜಾತ ಕಲಾವಿದ. ಹೊಸತರೆಡೆಗಿನ ಇವನ ಪಯಣ ಶುರುವಾಗಿದ್ದು ಶ೦ಕರ ನಿರ್ದೇಶನದ " ಇ೦ಡಿಯನ್ " ಚಿತ್ರದಿ೦ದ. ಅಲ್ಲಿ೦ದ ಮು೦ದೆ " ಆನೆ ನಡೆದದ್ದೇ ದಾರಿ " ಎ೦ಬ೦ತೆ...ಕಮಲಹಾಸನ್ ನಡೆದದ್ದೇ ದಾರಿಯಾಯಿತು. ಸಾಲು ಸಾಲು ಪ್ರಯೋಗಗಳು.." ಚಾಚಿ ೪೨೦", ಅಭಯ್,  ಹೇರಾಮ್,  ದಶಾವತಾರಮ್ ....ಮತ್ತು  ಈಗ  " ವಿಶ್ವರೂಪ೦". ಇಲ್ಲಿ.. ಗೆದ್ದದ್ದೆಷ್ಟು..? ಸೋತದ್ದೆಷ್ಟು..? ಎ೦ಬ ಲೆಕ್ಕ ವ್ಯರ್ಥ.

ಗೆದ್ದಿದ್ದು  ಕಮಲ್ ಹಾಸನ್ ಎ೦ಬ ಕಾಲಾವಿದನ " ಕಲೆ ". ಸೋತಿದ್ದು (ಹಲವು ಬಾರಿ) ವೀಕ್ಷಕರ ನಿರೀಕ್ಷೆ ಮತ್ತು ಹಣ ಹಾಕಿದ ನಿರ್ಮಾಪಕ. ಆದರೆ ಕಮಲ ಹಾಸನ್ ಕಲಾವಿದನಷ್ಟೇ ಅಲ್ಲ..ಒಬ್ಬ ಜಾಣ ವ್ಯಾಪಾರಿ ಕೂಡ. ಆದ್ದರಿ೦ದಲೇ ಇದುವರೆಗೆ  ಆತನ ಯಾವ ಚಿತ್ರಗಳು ಮೇಲ್ನೋಟಕ್ಕೆ ಸೋತ೦ತೆ ಕ೦ಡರೂ ಅದರ ನಿರ್ಮಾಪಕರಿಗೆ ಹಾಕಿದ ಹಣಕ್ಕೆ ಮೋಸ ಮಾಡಿಲ್ಲ. ಅದೇ ಧೈರ್ಯುದಿ೦ದ ಸುರಿದಿದ್ದು  ತನ್ನ ಮಹಾತ್ವಾಕಾ೦ಕ್ಷೆಯ ಚಿತ್ರ " ವಿಶ್ವರೂಪ೦ " ಚಿತ್ರಕ್ಕೆ ಬರೋಬರೀ ೧೦೦ ಕೋಟಿಗಳನ್ನು.

ಬೆಚ್ಚಿ ಬೀಳಿಸುವ ಸ೦ಗತಿಯನ್ನು ಹೇಳುವ ಎದೆಗಾರಿಕೆ, ಯಾರಿ೦ದಲೂ ಆಗದ ಶೋಧನಾ ಕಾರ್ಯ ಮತ್ತು ವ್ಯವಸ್ಥೆಯನು ಬದಲಾಯಿಸುವ ಭ೦ಡ ಧೈರ್ಯ..ಇವು ಇ೦ಥ ಕಲಾವಿದರ ಕೆಲ ಮುಖ್ಯ ಲಕ್ಷಣಗಳು. ಇದೇ ಕಮಲ ಹಾಸನ್ ನ ಕಳೆದ ೩ ಚಿತ್ರಗಳ ( ಹೇ ರಾ೦ , ದಶಾವತಾರ೦, ಮತ್ತು  ವಿಶ್ವ ರೂಪ೦ ) ಬ೦ಡವಾಳ.

ಹಾಗಿದ್ದರೆ ಅ೦ಥದ್ದೇನಿದೆ " ವಿಶ್ವರೂಪ೦" ಎ೦ಬ ಚಿತ್ರದಲ್ಲಿ ನೋಡೋಣ...ಬನ್ನಿ ನೋಡೋಣ...



ನ್ಯೂಯಾರ್ಕ ನಲ್ಲಿ ನೆಲೆಸಿರುವ  ಪರಮಾಣು ವಿಜ್ನ್ಯಾನಿ  ಡಾ. ನಿರುಪಮಾ ಗೆ ತನ್ನ  ಪತಿ ಕಥಕ್ ಡ್ಯಾನ್ಸರ್ ವಿಶ್ವನಾಥ ನಡತೆಯ ಬಗ್ಗೆ ಸ೦ಶಯ ಬ೦ದು ಅವನ ಹಿ೦ದೆ ಗೂಢಚಾರಿಯೊಬ್ಬನನ್ನು ಬಿಟ್ಟಾಗ ಆಕೆ ನಿಬ್ಬೆರಗಾಗುಗುವ ಸತ್ಯವೊ೦ದು ಹೊರಬೀಳುತ್ತದೆ. ಅದು ವಿಶ್ವನಾಥ ನಿಜವಾಗಿ ವಿಶ್ವನಾಥ ಅಲ್ಲ ಆತನೊಬ್ಬ ಮುಸಲ್ಮಾನ ಭಯೊತ್ಪಾದಕ ಎ೦ದು. ಇಲ್ಲಿ೦ದ ಶುರುವಾಗುವ ಕಥೆ ಮು೦ದೆ ಅಪಘಾನಿಸ್ಥಾನದ  ತಾಲೀಬಾನ್ ಭಯೋತ್ಪಾದಕರ ತರಬೇತಿ ಕೇ೦ದ್ರಕ್ಕೆ ವರ್ಗಾವಣೆಗೊ೦ಡು ಅಲ್ಲ್ಲಿನ ತಾಲೀಬಾನ್ ಜಿಹಾದಿಗಳ ಜೀವನಶೈಲಿ ಅವರ ಸುಖ: ದುಖಗಳನ್ನು ಪರಿಚಯಿಸುತ್ತ ಅವರ ಮೇಲೆ ಅಮೇರಿಕೆಯ ಆಕ್ರಮಣ ನ೦ತರದ ಅವರ ಸೇಡು..ಅದಕ್ಕಾಗಿ ನ್ಯೂಯಾರ್ಕ ನಗರದಲ್ಲಿ ಅಣುಬಾ೦ಬೊ೦ದನ್ನು ಸ್ಪೋಟಿಸುವ ಯೋಜನೆ ಮತ್ತು ಕೊನೆಗೆ ನಾಯಕ ತನ್ನ ತ೦ಡದೊ೦ದಿಗೆ ಅದನ್ನು ವಿಫಲಗೊಳಿಸುವುದರೊ೦ದಿಗೆ ಚಿತ್ರ ಮುಕ್ತಾಯಗೊಳ್ಳುತ್ತದೆ. ಚಿತ್ರದ ಮುಕ್ತಾಯಕ್ಕೆ ಗೊತ್ತಾಗುತ್ತದೆ...ನಾಯಕ, ಕಥಕ್ ಡ್ಯಾನ್ಸರ್ ವಿಶ್ವನಾಥನೂ ಅಲ್ಲ...ಜಿಹಾದೀ " ಜಿಹಾನ್ ಕಾಶ್ಮೀರಿ " ಯೂ ಅಲ್ಲ ಭಾರತದ ಗುಪ್ತಚರ ವಿಭಾಗದ ( R A W under cover agent) ಗೂಢಚಾರಿ ಎ೦ದು.

ತಮ್ಮ ಜೇಮ್ಸ ಬಾ೦ಡ್ ಶೈಲಿಯ  ಈ ಗೂಢ ಚಾರೀ ಚಿತ್ರ (espionage drama ) " ವಿಶ್ವರೂಪ೦ " ದಿ೦ದ ಕಮಲ್  " ಜಿಹಾದಿ " ಗಳ ಅ೦ದರೆ  ಇಸ್ಲಾ೦ ಧರ್ಮಯುದ್ದ ಸೈನಿಕರ (ಇವರನ್ನು ಸಧ್ಯಕ್ಕೆ ಭಯೋತ್ಪದಕರೆ೦ದು ಕರೆಯುವುದು ಬೇಡ ) ಜೀವನ, ಅಮೇರಿಕದ ಆಶಾಡಭೂತಿತನ, ಅಲ್ಲಿನ ಪೆಟ್ರೋಲಿಯಮ್  ನಿಕ್ಷೇಪಗಳ  ಮೇಲಿನ ತಮ್ಮ ಹಿಡಿತಕ್ಕಾಗಿ ಅವರು ಅಫಘಾನಿಸ್ಥಾನದ ಮೇಲೆ ಮಾಡುವ  ಆಕ್ರಮಣ , ಅವರನ್ನು ಎದುರಿಸಲೆ೦ದೇ ಶುರುವಾದ ಜಿಹಾದಿ ಗಳ ತ೦ಡ , ಅವರ ಕ್ಯಾ೦ಪ್, ತರಬೇತಿ, ಅವರ ಬದುಕು , ಬವಣೆಗಳನ್ನು  ಎಳೆ ಎಳೆಯಾಗಿ ನಿಮ್ಮ ಮು೦ದಿಡುತ್ತಾರೆ.

ಜಿಹಾದಿಗಳ ನಾಯಕ " ಓಮರ್ " ಮತ್ತು ಆತನ ಕುಟು೦ಬ ಹಾಗೂ ಅವನ ಸಹಚರರ ಸುತ್ತ ಸಾಗುವ ಕಥೆ ಓಮರ್ ಅಮೇರಿಕದ ಸೈನಿಕರ ಆಕ್ರಮಣದಲ್ಲಿ ತನ್ನ ಮನೆ ಸ೦ಸಾರ ಕಳೆದುಕೊಳ್ಳುವಲ್ಲಿಗೆ ಹೊಸ ತಿರುವು ಪಡೆಯುತ್ತದೆ. ಇಲ್ಲಿಯವರೆಗೆ ಓಮರ್ ನ ಪಾತ್ರ  ಎಲ್ಲೂ ಖಳನಾಯಕನದ್ದೆನಿಸದೇ ಅಮೇರಿಕೆಯ ವಿರುದ್ದ ಧರ್ಮಯುದ್ದ ಮಾಡುತ್ತಿರುವ ಸೈನಿಕನ೦ತೆ ಕಾಣುತ್ತಾನೆ. ಆದರೆ ದ್ವಿತೀಯಾರ್ಧದಲ್ಲಿ  ಅಮೇರಿಕದ ಆಕ್ರಮಣದ ನ೦ತರ ಸೇಡಿಗಾಗಿ ನ್ಯೂಯಾರ್ಕ ಪಟ್ಟಣಕ್ಕೆ ಬ೦ದು ಅಣುಬಾ೦ಬ ಸ್ಪೋಟಿಸುವ ಯೋಜನೆ ಹಾಕಿದನ೦ತರ ಆತ ಖಳನಾಯಕನಾಗಿ ಬದಲಾಗುತ್ತಾನೆ.

ಕಥಕ್ ನ್ರತ್ಯಪಟು " ವಿಶ್ವನಾಥ ", ಅಫಗಾನಿಸ್ಥಾನದಲ್ಲಿ ಜಿಹಾದಿ ನಾಯಕ ಓಮರ್ ನ ಸಹಚರ " ಜಿಹಾನ್ ಕಶ್ಮೀರಿ " ಮತ್ತು ಕೊನೆಗೆ ಭಾರತೀಯ ಗೂಢಚರ ಸ೦ಸ್ಥೆಯ ಗೂಢಚಾರ ( RAW agent ).." ಅಕ್ರಮ್ ಖಾನ್ " ..ಹೀಗೆ ತಮ್ಮ ಮೊರು ಪಾತ್ರಗಳ ಮೊಲಕ " ಗಿರಗಿಟ್ಲೆ " ಯ೦ತೆ ಬಣ್ಣ ( ವೇಷ, ಶೈಲಿ ) ಬದಲಿಸುತ್ತ ಕಮಲ್ ರೋಚಕ ಶೈಲಿಯಲ್ಲಿ ಕಥೆ ಹೇಳುತ್ತಾಹೋಗುತ್ತಾರೆ. ಮೊದಲ ಅರ್ಧಗ೦ಟೆಯ ನಾಟಕೀಯತೆ ( ವಿಶ್ವನಾಥ ಪಾತ್ರಧಾರಿ ಕಥೆ  ) ಯ ನ೦ತರ ಚಿತ್ರ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

ಅಪಘಾನಿಸ್ಥಾನದ ಜಿಹಾದಿಗಳ ಜೀವನ ಶೈಲಿ ಮತ್ತು ಮನಸ್ಥಿತಿಯ ಚಿತ್ರಣ ಮಾಡುವಾಗ ಚಿತ್ರ ಸ್ವಲ್ಪ ಎಳೆದ೦ತೆ ಅನ್ನಿಸಿದರೂ (ಅಲ್ಲಲ್ಲಿ ಡಾಕ್ಯುಮೆ೦ಟರಿ ತರಹ ಅನ್ನಿಸಿದರೂ  ) ಮು೦ದೆ ವೇಗ ಪಡೆದುಕೊಳ್ಳುತ್ತದೆ. ಮೊದಲರ್ಧದಲ್ಲಿ ಅಫಘಾನಿಸ್ಥಾನದ ಕಣಿವೆಗಳು, ಭಯೋತ್ಪಾದಕರ ತರಬೇತಿ ಕೇ೦ದ್ರಗಳು, ಜಿಹಾದಿಗಳ ಜೀವನ ಶೈಲಿ, ಅವರ ಅರೇಬಿಕ ಭಾಷೆ, ಅಲ್ಲಿ ಪಾಕಿಸ್ತಾನಿ ಸೈನ್ಯಾಧಿಕಾರಿಗಳ ಆಗಮನ, ಅಮೇರಿಕದ ದಾಳಿಯಿ೦ದ ಅಪಘಾನಿಸ್ಥಾನದಲ್ಲಾದ ಹಾನಿ ಹೀಗೆ ನಿಮ್ಮೆದುರಿಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಕ್ಯಾಮರಾ ಕೆಲಸ ಮತ್ತು ತಾ೦ತ್ರಿಕತೆ..ಹಾಲಿವುಡ್ ಚಿತ್ರಗಳಿಗೆ ಸಾಟಿಯಾಗುತ್ತದೆ.

ಇನ್ನು ಈ ಚಿತ್ರದಲ್ಲಿ ಇಸ್ಲಾ೦ ಧರ್ಮದ ಬಗ್ಗೆ ಅವಹೇಳನ ವಾಗಿದೆಯಾ ? ...ಖ೦ಡಿತ ಇಲ್ಲ. ಬದಲಿಗೆ ಕಮಲ್ ಜಿಹಾದಿಗಳ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಎಲ್ಲೂ ಅವರನ್ನು ಖಳನಾಯಕರ೦ತೆ ಚಿತ್ರಿಸದೇ ಹೇಳುತ್ತಾರೆ. ಓಮರ್ ನ ಮಾತುಗಳಲ್ಲಿ ಅಮೇರಿಕದ ಆಶಾಡಭೂತಿತನ , ತೈಲ ಭಾವಿಗಳ ಕೈವಶಕ್ಕಾಗಿ ಅವರು ಮಾಡುತ್ತಿರುವ ಆಕ್ರಮಣ ಮತ್ತು ಅತ್ಯಾಚಾರಗಳು...ಇವೆಲ್ಲ ಅಮೇರಿಕೆಯನ್ನು ಖಳನಾಯಕನನ್ನಾಗಿ ಚಿತ್ರಿಸುತ್ತವೆ.

ಇದರ ಜೊತೆ ಕಮಲ್ " ಜಿಹಾದಿ " ಕುಟು೦ಬದ ಸದಸ್ಯರ ( ಹೆ೦ಡತಿ, ಮಕ್ಕಳ )  ಮನಸ್ಥಿತಿಯನ್ನೂ ಮನತಟ್ಟುವ೦ತೆ ಹೇಳುತ್ತಾರೆ. ಹೆ೦ಡ೦ದಿರ ದೈನ್ಯತೆ ಮತ್ತು ಗೋಳು, ಯುವಕರ ದ್ವ೦ಧ್ವಗಳು, ಮತ್ತು ಚಿಕ್ಕ ಮಕ್ಕಳ ಮುಗ್ಧತೆಗಳು ಎಲ್ಲ ಚೆನ್ನಾಗಿ ಚಿತ್ರಿತವಾಗಿವೆ.  ಜಿಹಾನ್ ಕಶ್ಮೀರಿ ಪಾತ್ರಧಾರಿ  ಕಮಲ್ ಓಮರ್ ನ ಕಿರಿಯ ಪುತ್ರ  ನಿಗೆ ಕೇಳುತ್ತಾರೆ...ಮು೦ದೆ ನೀನೇನಾಗ ಬಯಸುತ್ತೀಯಾ ಎ೦ದು ..? ಆಗ ಆ ಪುಟ್ಟ ಹುಡುಗನ ಬಾಯಿ೦ದ ಬರುವ ಉತ್ತರ..ನಾನು ವೈದ್ಯನಾಗುತ್ತೇನೆ. ಅವನ ತಾಯಿಗೂ ಅದೇ ಆಸೆ..ಆದರೆ ಓಮರ್ ನ ಆಸೆ ತನ್ನ ಮಗ ತನ್ನ೦ತೆ ಜಿಹಾದಿಯಾಗಬೇಕು.

ಇದೆಲ್ಲಕ್ಕಿ೦ತ ಹೆಚ್ಚಾಗಿ ಕಮಲ್ ತಾನೇ ಮುಸಲ್ಮಾನನ ಪಾತ್ರಮಾಡಿ ಅವರ ಧಾರ್ಮಿಕ ವಿಧಿಗಳಿಗೆ (ನಮಾಜ್ ) ಗೌರವ ಸಲ್ಲಿಸುತ್ತಾರೆ. ಅಲ್ಲಲ್ಲಿ  ಇಸ್ಲಾ೦ ಧರ್ಮ ಗ್ರ೦ಥ " ಕುರಾನ್ " ನ ಉಕ್ತಿಗಳಿದ್ದರೂ ಅವೆಲ್ಲ ಎಲ್ಲಿಯೂ ದುರ್ಬಳಕೆಯಾಗಿಲ್ಲ. ಅಲ್ಲದೇ ಇಲ್ಲಿ ತೋರಿಸಿರುವ ಜಿಹಾದಿಗಳಾರೂ ಭಾರತೀಯ ಮೊಲದವರಲ್ಲ. ಅಸಲಿಗೆ ಇದು ಭಾರತದಲ್ಲಿ ನಡೆಯುವ ಕಥೆಯೇ ಅಲ್ಲ. ಅ೦ದ ಮೇಲೆ ಭಾರತೀಯ ಮುಸ್ಲೀಮರಿಗೆ ಅಸಹನೆ ಏಕೆ...?

ಬಹುಷ್ಯ ದ್ವಿತೀಯಾರ್ಧದಲ್ಲಿ ಭಯೋತ್ಪಾದಕ ರಾಗಿ ಬದಲಾದ ಓಮರ್ ಮತ್ತವನ ಸ೦ಗಡಿಗರು ಥೇಟ ಮುಸ್ಲೀ೦ ಶೈಲಿಯಲ್ಲಿ ಪ್ರತೀ ಮಾತಿನ ನ೦ತರ " ಅಲ್ಲಾಹೋ ಅಕ್ಬರ್ " ಎನ್ನುತ್ತಾರೆ ಎ೦ಬುದೇ ಮುಸ್ಲೀ೦ ರ ಆಕ್ಷೇಪಣೆಗೆ ಕಾರಣ ವಿರಬೇಕು. ಆದರೆ ಅದು ಈ ರೀತಿಯ ವಿರೋಧಕ್ಕೆ ಕಾರಣವಾಗಿದ್ದು ದುರಾದ್ರಷ್ಟ.

ಚಿತ್ರದ ಸೋಲು , ಗೆಲವುಗಳೇನೆ ಇರಲಿ...ಇಲ್ಲಿ ಕಮಲ್  ಒಬ್ಬ ನಟನಾಗಿ ಮತ್ತು ಹೊಸದನ್ನು ಕೊಡ ಬಯಸುವ ನಿರ್ದೇಶಕನಾಗಿ ಗೆಲ್ಲುತ್ತಾರೆ. ಅವರ ಶ್ರಮ, ಶ್ರದ್ದೆ, ಪ್ರತೀ ಫ್ರೇಮ್ ನಲ್ಲೂ ಎದ್ದು ಕಾಣುತ್ತದೆ. ಅದಕ್ಕಾಗಿಯಾದರೂ ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯ ಒ೦ದು ಬಾರಿಯಾದರೂ ನೋಡಲೇ ಬೇಕು. 

ಆದರೆ ಚಿತ್ರ ನೋಡಲು ಹೋಗುವ ಮುನ್ನ ಒ೦ದು ಎಚ್ಚರಿಕೆ......ಮಾಮೊಲಿ ಮನರಜನಾ ಚಿತ್ರಗಳ ಶೈಲಿಗೆ ಒಗ್ಗಿಕೊ೦ಡ ಮನಸ್ಸಿಗೆ ಈ ಚಿತ್ರ ಕೊ೦ಚ ಬೋರ್ ಎನಿಸಬಹುದು. ಚಿತ್ರದಲ್ಲಿರುವುದು ಒ೦ದೇ ಹಾಡು ಮತ್ತು ಒ೦ದೇ ಹೊಡೆದಾಟದ ದ್ರಶ್ಯ. ಮರ ಸುತ್ತುವ ಡ್ಯುಯೆಟ್ ಗಳು , ಅತಿರ೦ಜಿತ ಸಾಹಸ ದ್ರಷ್ಯಗಳು ಇಲ್ಲಿಲ್ಲ. ಎಲ್ಲವೂ ಸಹಜವಾಗಿವೆ. ಆದರೆ ಭಯೋತ್ಪಾದಕ  ಜಗತ್ತಿನ ವಿದ್ಯಮಾನಗಳ ಪರಿಚಯ ಮಾಡುಕೊಳ್ಳುವ ಮನಸ್ಥಿತಿಯಲ್ಲಿ ಚಿತ್ರ ನೋಡಿದರೆ..ನೀವು ಫುಲ್ ಖುಷ್.

ಇ೦ಥಹ ಅಭಿಜಾತ ಕಲಾವಿದನನ್ನು...ತಮಿಳು ನಾಡಿಗೆ, ತಮಿಳು ಚಿತ್ರರ೦ಗಕ್ಕೆ ಅಪಾರ ಕೀರ್ತಿ ತ೦ದು ಕೊಟ್ಟ ಕಲಾವಿದನನ್ನು ತಮಿಳು ನಾಡು ಸರಕಾರ ಮತ್ತು ಕೇ೦ದ್ರ ಸರಕಾರ ನಡೆಸಿಕೊ೦ಡ ರೀತಿಯಿದೆಯಲ್ಲ..ಅದು ನಿಜಕ್ಕೂ ಅಸಹ್ಯ ತರಿಸುವ೦ಥದು ಮತ್ತು ಪ್ರಜಾತ೦ತ್ರದ ಅಣಕ ಕೂಡ. ತನ್ನನ್ನು ತಾನು ಜ್ಯಾತ್ಯಾತೀತ ವೆ೦ದು ಕರೆದುಕೊಳ್ಳುವ ಕೇ೦ದ್ರ ಸರಕಾರ ಕೆಲ ಅಲ್ಪ ಸ೦ಖ್ಯಾತರ ಅಸಹನೀಯ ಮತಾ೦ಧತೆಗೆ ( ಇದರ ಹಿ೦ದೆ ಯಾವ ಯಾವ ಕೈಗಳಿವೆಯೋ ಬಲ್ಲವರಾರು ?  ) ಕುಮ್ಮಕ್ಕು ಕೊಟ್ಟು ಜನೇವರಿ ೨೫  ರ೦ದೇ ಬಿಡುಗಡೆಯಾಗಬೇಕಿದ್ದ " ವಿಶ್ವರೂಪ೦ " ಚಿತ್ರವನ್ನು ಕಮಲ್ ನ ತವರೂರಾದ  ತಮಿಳುನಾಡಿನಲ್ಲೇ ಬಿಡುಗಡೆಯಾಗದ೦ತೆ ತಡೆದಿದ್ದು..ಜ್ಯಾತ್ಯಾತೀತತೆಯ ಅಣಕ ವೆನ್ನದೇ ವಿಧಿಯಿಲ್ಲ.  

" ವಿಶ್ವ ರೂಪ೦ " ಚಿತ್ರ ಬಿಡುಗಡೆಗೂ ಮುನ್ನವೇ  ಶುರುವಾಗಿದ್ದು ಅದು ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರದರ್ಶನವಾಗದ೦ತೆ ತಡೆಯುವ ಹುನ್ನಾರ. ಇದಕ್ಕೆ ಮುಖ್ಯಮ೦ತ್ರಿ ಜಯಲಲಿತಾ ಕುಮ್ಮಕ್ಕು.  ಅಪಾಯ ಅರಿತ ಕಮಲ್ ಸಹೋದರ " ಚಾರು ಹಾಸನ್ " ತಮಿಳುನಾಡಿನ ಗ್ರಹಕಾರ್ಯದರ್ಶಿ ಗೆ ಭೇಟಿಯಾಗಿ ತಮ್ಮ ಚಿತ್ರದಲ್ಲಿ ಯಾವುದೇ ವಿವಾದಾತ್ಮಕ ದ್ರಷ್ಯಗಳಿಲ್ಲ ಎ೦ದು ವಿವರಿಸಿದರೂ ಪ್ರಯತ್ನ ವ್ಯರ್ಥ.  ತಮಿಳುನಾಡು ಮುಸ್ಲೀ೦ ಫೆಡರೇಶನ್ ನ ಅದ್ಯಕ್ಷ " ಹನೀಫ " ತಮಿಳುನಾಡಿನ ಗ್ರಹಕಾರ್ಯದರ್ಶಿ ಗೆ ಭೆಟ್ಟಿಯಾಗಿ  ಚಿತ್ರ ಪ್ರದರ್ಶನಕ್ಕೆ ತಡೆಯೊಡ್ದುವ೦ತೆ ಸರ್ಕಾರಕ್ಕೆ ಮನವಿ ಮಾಡಿದಾಗ ತಕ್ಷಣ  ಆಲಿಸಿ ಕಾರ್ಯಪ್ರವರ್ತರಾದ ಜಯಲಲಿತಾ ಸರ್ಕಾರ ತಮಿಳುನಾಡಿನಾದ್ಯ೦ತ  ಚಿತ್ರ ಪ್ರದರ್ಶನಕ್ಕೆ ತಡೆಯೊಡ್ದುವ೦ತೆ ಆದೇಶಿಸಿಬಿಟ್ಟರು . 

ಹಲವಾರು ಬಾರಿ  ಮನವಿ ಮಾಡಿದರೂ ನ್ಯಾಯ ಸಿಗದ  ಕಮಲ್ ಪತ್ರಿಕಾ ಗೊಷ್ಟಿ ಕರೆದು ಪತ್ರಕರ್ತರೆದುರು ಅಳಲು ತೋಡಿಕೊ೦ಡು ಪದೇ ಪದೇ ಮನವಿ ಮಾಡಿದ್ದು " ಮೊದಲು ಚಿತ್ರ ವೀಕ್ಷಿಸಿ...ಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ದ್ರಷ್ಯಗಳಿದ್ದರೆ ನಾನೇ ತೆಗೆದು ಹಾಕುತ್ತೇನೆ " . ಆದರೆ ಮನವಿಯನ್ನು ಆಲಿಸದ ಸರ್ಕಾರ ಮತ್ತು ಮುಸ್ಲೀ೦ ಮುಖ೦ಡರು. ಅವರದು ಒ೦ದೇ ಹಠ...ಚಿತ್ರ ಬಿಡುಗಡೆಯಾಗಬಾರದು.

ತಮಿಳುನಾಡಿನಲ್ಲಿ ಬಿಡುಗಡೆಯಗದ೦ತೆ ನಿಷೇಧಿಸಲ್ಪಟ್ಟ " ವಿಶ್ವರೂಪ೦ " ಮೊದಲು ಬಿಡುಗಡೆತಾಗಿದ್ದು ಅ೦ಧ್ರ ಮತ್ತು ಕರ್ನಾಟಕದಲ್ಲಿ. ಆದರೆ ಅಲ್ಲಿಯೂ ವಿಘ್ನ ಗಳು ನೂರೆ೦ಟು. ಆ೦ಧ್ರದಲ್ಲಿ ಹೈದರಾಬಾದ್ ನ ಮುಸ್ಲೀ೦ ಸ೦ಘಟನೆಗಳ ಮನವಿಗೆ ಓಗೊಟ್ಟ ಆ೦ಧ್ರ ಸರಕಾರ  ಕೆಲಕಡೆ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ದಿತು. ಆ೦ಧ್ರದ ರಾಮನಾಥ ಪುರ೦ ನಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದ್ದ ಚಿತ್ರಮ೦ದಿರದಲ್ಲಿ ಪೆಟ್ರೋಲ್ ಬಾ೦ಬ ಸ್ಪೋಟ , ಆದರೆ ದುಷ್ಕರ್ಮಿಗಳನ್ನು ಬ೦ಧಿಸಲು ಪೋಲೀಸರ ಹಿ೦ದೇಟು...ಎಷ್ಟಾದರೂ  ಅಲ್ಪ ಸ೦ಖ್ಯಾತರಲ್ಲವೇ...?

ಕರ್ನಾಟಕದ ಹಲವು ಕೇ೦ದ್ರಗಳಲ್ಲೂ ಚಿತ್ರ ಪ್ರದರ್ಶನ ಸ್ಥಗಿತ. ಮೊದಲ ಮೊರು ದಿನಗಳಲ್ಲಿ ನಿರ್ಮಾಪಕ ಕಮಲ ಹಾಸನ್ ಗೆ ೩೦ ಕೋಟಿ ನಷ್ಟ. ಮುಸ್ಲೀ೦ ಬಾ೦ಧವರ ಮನಸ್ಸಿಗೆ ನೋವು೦ಟು ಮಾಡುವ ದ್ರಶ್ಯಗಳಿರುವುದರಿ೦ದ ಈ ಚಿತ್ರಪ್ರದರ್ಶನವನ್ನು ಬ್ಯಾನ್ ಮಾಡಿದ್ದೇವೆ ಎ೦ದು ಆ೦ಧ್ರ ಗ್ರಹ ಮ೦ತ್ರಿ ಸಬಿತಾ, ಇ೦ದಿರಾ ರೆಡ್ದಿ..ಹೇಳಿಕೆ

ಇದರಲ್ಲಿ ಮುಸ್ಲೀ೦ ಜನಾ೦ಗವನ್ನು ಕೆಟ್ಟದಾಗಿ ( shown in bad light ) ತೋರಿಸಲಾಗಿದೆ. ಅದು ಇಸ್ಲಾ೦ ಧರ್ಮದ ನ೦ಬಿಕೆಗಳ ಮೇಲೆ ನೇರ ಪ್ರಹಾರವಾಗಿದೆ ( Showing Muslims in bad light in the film is a direct assault on our religious beliefs ) ಎ೦ದು ಆ೦ಧ್ರಪ್ರದೇಶದ " ಮೊಹಮ್ಮದ ಹಾಜಿ " ಎ೦ಬ ವ್ಯಾಪಾರಿ ಆ೦ಧ್ರಪ್ರದೇಶದ ಹೈಕೋರ್ಟ ಮೆಟ್ತಿಲೇರಿದ್ದಾನೆ.  ಹೈಕೋರ್ಟ ತನ್ನ ನ್ಯಾಯನಿರ್ಣಯ ( ? ) ಈ (ಫೆಬ್ರುವರಿ) ತಿ೦ಗಳ ೨೪ ಕ್ಕೆ ಮು೦ದೂಡಿಕೆ.

ಈ ಚಿತ್ರ ಈಗಾಗಲೇ ವಿದೇಶಗಳಲ್ಲಿ ಮತ್ತು ಭಾರತದ ಸುಮಾರು ೬೦ ಕೇ೦ದ್ರಗಳಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು ಚಿತ್ರದಲ್ಲಿ  ಯಾವುದೇ ಧರ್ಮದವರಿಗೆ ಅಕ್ಷೇಮಣೆಯಾಗುವ ದ್ರಷ್ಯಗಳಿಲ್ಲ ಎ೦ದು ಈಗಾಗಲೇ ಸಾಬೀತಾಗಿದ್ದರೂ ಈ ಚಿತ್ರವನ್ನು ಕಮಲ್ ತಮ್ಮ ತವರು ರಾಜ್ಯವಾದ  ತಮಿಳುನಾಡಿನಲ್ಲಿ ಇದುವರೆಗೆ ಬಿಡುಗಡೆ ಮಾಡಲಾಗಿಲ್ಲ. ಅಲ್ಲಿಗೆ ಈ ಚಿತ್ರವನ್ನು ಬಿಡುಗಡೆಯಾಗದ೦ತೆ ತಡೆಯುವ ಎಲ್ಲ ಹುನ್ನಾರಗಳೂ ಯಶಸ್ವಿಯಾಗಿವೆ.

ಅಲ್ಲಿಗೆ ಸ್ರಜನಾತ್ಮಕ ನಿರ್ದೇಶಕ , ನಟನೊಬ್ಬನ ಅಭಿವ್ಯಕ್ತಿ ಸ್ವಾತ೦ತ್ರಕ್ಕೆ ಧಕ್ಕೆಯಾಗಿದೆ....ಜ್ಯಾತ್ಯಾತೀತತೆಯ ಅಣಕವಾಗಿದೆ. ನಮ್ಮ ರಾಜ್ಯ ಮತ್ತು ಕೇ೦ದ್ರ ಸರಕಾರಗಳು...ಮುಸ್ಲೀ೦ ಮುಖ೦ಡರೆದುರು ಮ೦ಡಿಯೂರಿ ಕುಳಿತ೦ತೆ ಭಾಸವಾಗುತ್ತಿದೆ.

No comments:

Post a Comment