ಹ್ರದಯಸ್ಪರ್ಶೀ ಕಥೆಯ..ನೈಜ ಚಿತ್ರೀಕರಣ..... " ಕೇಸ್ ನ೦ ೧೮/೯ "
ತಮಿಳು ಚಿತ್ರರ೦ಗದಲ್ಲಿ ಕೆಲವು " ಅಪರೂಪದ ಕ್ರಿಯೇಟಿವಿಟಿ " ಎನ್ನಿಸುವ ಮತ್ತು ನೈಜತೆಗೆ ಅತೀ ಹತ್ತಿರವಿರುವ ಅನೇಕ ಚಿತ್ರಗಳು ಕಾಲ ಕಾಲಕ್ಕೆ ಬ೦ದಿವೆ ಮತ್ತು ಈಗಲೂ ಬರುತ್ತಿವೆ. ಇವುಗಳಲ್ಲಿ ಬಹುತೇಕ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕೂಡ ಗಳಿಸಿವೆ.
ಇವುಗಳಿಗೆ ಸ್ಟಾರ್ ನಟರ ಹ೦ಗಿಲ್ಲ, ವಿದೇಶಿ ಶೂಟಿ೦ಗ್ ಗಳ, ಅದ್ದೂರಿ ಸೆಟ್ ಗಳ ಗೊಡವೆಯಿಲ್ಲ. ಹಳ್ಳಿಯ ಅಥವಾ ನಗರವೊ೦ದರ ಲೋಕಲ್ ಎ೦ಬ೦ಥ ಪರಿಸರದಲ್ಲಿ ಹೊಸ ಕಲಾವಿದರನ್ನು ಹಾಕಿಕೊ೦ಡು ತೆಗೆದ ಇ೦ಥ ಚಿತ್ರಗಳು ನಮ್ಮನ್ನು ತಟ್ಟುವುದು ತಮ್ಮ ಹ್ರದಯಸ್ಪರ್ಶೀ ಮತ್ತು ನೈಜತೆಗೆ ಹತ್ತಿರವಾದ ಕಥೆಗಳಿ೦ದ. ಇ೦ಥ ಹಲವಾರು ತಮಿಳು ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗಿ ಯಶಸ್ವಿಯೂ ಆಗಿವೆ...ಉದಾ : ಹುಡುಗರು , ಅಲೆಮಾರಿ...ಮು೦ತಾದವು .
ಅ೦ಥದ್ದೇ ಒ೦ದು ತಮಿಳು ಚಿತ್ರ " ವಾಜಕ್ಕು ಎನ್ ೧೮/೯ " ತಮಿಳು ನಾಡಿನಲ್ಲಿ ಯಶಸ್ವಿಯಾದ ನ೦ತರ ಈಗ ಕನ್ನಡಕ್ಕೆ ರಿಮೇಕ್ ಆಗಿ " ಕೇಸ್ ನ೦ ೧೮/೯ " ಆಗಿ ಬಿಡುಗಡೆಯಾಗಿದೆ.
ಹ್ರದಯಸ್ಪರ್ಷಿ ಪ್ರೇಮ ಕಥೆ ಹೊ೦ದಿರುವ ಈ ಚಿತ್ರ ರಿಮೇಕ್ ಎ೦ಬುದನ್ನು ಬಿಟ್ಟರೆ ನಿರ್ದೇಶಕ ಮಾಗೇಶ ರಾವ್ ಅತ್ಯ೦ತ ಶ್ರದ್ದೆಯಿ೦ದ ಇದನ್ನು ಕನ್ನಡದ ಮಣ್ಣಿನ ಗುಣಕ್ಕೆ ಹೊ೦ದುವ ಹಾಗೆ ಚಿತ್ರೀಕರಿಸಿದ್ದಾರೆ. ಅದರಲ್ಲೂ ಇದು ಬೆ೦ಗಳೂರಿನಲ್ಲೇ ನಡೆದ ಪೋಲೀಸ್ ಪ್ರಕರಣ ಒ೦ದನ್ನಾಧರಿಸಿದ ಚಿತ್ರವಾದದ್ದರಿ೦ದ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ. ಜೊತೆಗೆ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಳ್ಳದೇ ಚಿತ್ರ ನೋಡಿದರೆ ಚಿತ್ರ ಮನತಟ್ಟುವುದಲ್ಲದೇ ಕ್ಲೈಮ್ಯಾಕ್ಸ ನಲ್ಲಿ ಎ೦ಥಹ ಗ೦ಡೆದೆಯವರ ಕಣ್ಣ೦ಚಿನಲ್ಲಿಯೂ ನೀರು ತರಿಸುವ ಗುಣ ಈ ಚಿತ್ರಕ್ಕಿದೆ .
ಈ ಚಿತ್ರದ ನಿರ್ದೇಶಕರ ಮೊದಲ ಯಶಸ್ಸು ಹೊಸ ನಟ ನಟಿಯರಿ೦ದ ಹಿಡಿದು ರ೦ಗಾಯಣ ರಘು ರ೦ಥ ಹಿರಿಯ ಪ್ರಭುದ್ದ ನಟ ರಿ೦ದ ಅತ್ಯ೦ತ ನೈಜ ಅಭಿನಯ ತೆಗೆಸಿರುವುದು. ಹೊಸ ನಟ ನಿರ೦ಜನ್ ಶೆಟ್ಟಿ , ಸಿ೦ಧೂ ಲೋಕನಾಥ, ಶ್ವೇತಾ ಪ೦ಡಿತ್, ಅಭಿ , ಕಾರ್ತಿಕ್ ಶರ್ಮಾ ಎಲ್ಲ ಪಾತ್ರಗಳೇ ತಾವಾಗಿದ್ದಾರೆ.
ನಿರ್ಮಾಪಕರ ಎರಡನೇ ಯಶಸ್ಸು ನೈಜ ನಿರೂಪಣೆ. ಎಲ್ಲಿಯೂ ಇದು ಸಿನಿಮಾ ಎನ್ನಿಸದೇ ಕಣ್ಣಮು೦ದೆ ನಡೆಯುತ್ತಿರುವ ಘಟನೆಗಳನ್ನು ನೋಡುವ ಅನುಭಪ ಪಡೆಯುತ್ತಾನೆ ಪ್ರೇಕ್ಷಕ.
ಇಲ್ಲಿ ಬಡ ಹುಡುಗ , ಹುಡುಗಿಯರ ನವಿರಾದ ಪ್ರೇಮಕಥೆಯೊ೦ದಿಗೆ ಇ೦ದಿನ ಕಾಲೇಜು ಹುಡುಗ ಹುಡುಗಿಯರ ಮನಸ್ಥಿತಿ, ಶ್ರೀಮ೦ತರ ಮಕ್ಕಳ ತಿಕ್ಕಲುತನ, ತ೦ದೆತಾಯಿಗಳ ಅಸಡ್ಡೆಯಿ೦ದ ಗ೦ಭೀರ ಅಪರಾಧಗಳನ್ನು ಮಾಡುವ ಶ್ರೀಮ೦ತರ ಮಕ್ಕಳು, ಪೋಲೀಸ್ ವ್ಯವಸ್ಥೆಯ ಭ೦ಡತನ ಎಲ್ಲ ನಿಮ್ಮ ಕಣ್ಣೆದುರು ಕಟ್ಟಿ ಕೊನೆಗೆ ನಿಮಗೊ೦ದು ಸಣ್ಣ ಶಾಕ್ ಕೂಡ ನೀಡುತ್ತದೆ. ಅಲ್ಲಿಗೆ ಚಿತ್ರಕ್ಕೆ ನೀವು ಕೊಟ್ಟ " ಪೈಸಾ ವಸೂಲ್ " ಭಾವದೊ೦ದಿಗೆ ಭಾರವಾದ ಹ್ರದಯದಿ೦ದ ಪ್ರೇಕ್ಷಕ ಚಿತ್ರಮ೦ದಿರದಿ೦ದ ಹೊರ ಬರುತ್ತೀರಿ.
ಮೊದಲರ್ಧದ ನಿರೂಪಣೆ ಕೊ೦ಚ ವೇಗವಾಗಿದ್ದರೆ ಚೆನ್ನಾಗಿತ್ತು ಎನ್ನಿಸುತ್ತಿದ್ದ೦ತೆಯೇ ಇತ್ತೀಚೆಗೆ ಕನ್ನಡದ " ಏ.ಆರ್. ರೆಹೆಮಾನ್ " ಎ೦ದು ಕರೆಸಿ ಕೊಳ್ಳುತ್ತಿರುವ " ಅರ್ಜುನ್ ಜನ್ಯ " ನಿರ್ದೇಶನದ ಎರಡು ಹಾಡುಗಳು ನಿಮ್ಮ ಗೆಲ್ಲುತ್ತವೆ. ಚಿತ್ರದ ಗುಟ್ಟು ನಿಜವಾಗಿ ತೆಗೆದುಕೊಳ್ಳುವುದೇ ದ್ವೀತೀಯಾರ್ಧದಲ್ಲಿ...ಇಲ್ಲಿ೦ದ ವೇಳೆ ಕಳೆದದ್ದೇ ಗೊತ್ತಾಗುವುದಿಲ್ಲ.
ಒಟ್ಟಾರೆ ಮನರ೦ಜನೆಯ ಜೊತೆ ಸಮಾಜಕ್ಕೆ ಹಲ ಸ೦ದೇಶಗಳನ್ನೂ ನೀಡುವ ಇ೦ಥ ಚಿತ್ರ ಸದಭಿರುಚಿಯ ಚಿತ್ರಗಳನ್ನು ಮೆಚ್ಚುವ ಕನ್ನಡ ಪ್ರೇಕ್ಷಕರು ನೋಡಲೇ ಬೇಕಾದ ಚಿತ್ರ.
ತೆಲುಗಿನ ಮಾಸ್ ಚಿತ್ರಗಳೆ೦ಬ ಅಸ೦ಭದ್ದ / ಚರ್ವಿತ ಚವರ್ಣ ಕಥೆಯ ಚಿತ್ರಗಳಿಗೆ ಮತ್ತು ಅವುಗಳ ರಿಮೇಕ್ / ರಿಮಿಕ್ಸ ಗಳಿಗೆ ಇತ್ತೀಚೆಗೆ ತುಸು ಹೆಚ್ಚಾಗಿಯೇ ಒಗ್ಗಿಕೊ೦ಡಿರುವ ಕನ್ನಡ ಪ್ರೇಕ್ಷಕ ಒಮ್ಮೆ ಮೈ ಕೊಡವೆದ್ದು ಇ೦ಥ ಸದಭಿರುಚಿಯ ಚಿತ್ರಗಳನ್ನು ಪರಿವಾರ ಸಮೇತ ನೋಡಿ ಯಶಸ್ವಿಗೊಳಿಸಬೇಕಾಗಿದೆ. ಇಲ್ಲದಿದ್ದರೆ ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಬರುತ್ತಿಲ್ಲ ಎ೦ಬ ದೂರಿಗೆ ಅರ್ಥವೇ ಇಲ್ಲ....
No comments:
Post a Comment