Tuesday, January 1, 2013

ಈ " ಕೀಚಕ ಯುಗ " ದ ಅ೦ತ್ಯ ಯಾವಾಗ...?

( " ಭ್ರಷ್ಟಾಚಾರ " ದ೦ತೆ..." ಅತ್ಯಾಚಾರ " ಕೂಡ ಸಾಮಾನ್ಯ ಘಟನೆ ಯಾದೀತೆ...?)

ಬೇಸರಿಸಬೇಡಿ...ಮತ್ತದೇ  " ದೆಹಲೀ ಸಾಮೊಹಿಕ ಅತ್ಯಾಚರ  " ದ ಕರಾಳ ನೆನಪು ಮತ್ತು ನ೦ತರದ ಪ್ರತಿಭಟನೆಗಳು ಮತ್ತೆ ಮತ್ತೆ  ಮನಸ್ಸನ್ನು ಕಾಡುತ್ತಿವೆ.

ಆದರೆ ಈ  ಕಾಡುವಿಕೆಯಾದರೂ ಎಷ್ಟುದಿನ...? ಇ೦ದು ಜನೆವರೀ ೧ , ೨೦೧೩, ಹೊಸವರ್ಷ . ನಿನ್ನೆ  ಡಿಸೆ೦ಬರ್ ೩೧ , ಕಳೆದ  ವರ್ಷದ ಕೊನೆಯದಿನ , ಮು೦ದಿನ ವರ್ಷವನ್ನು ಸ್ವಾಗತಿಸುವ ದಿನ. ಈ ಗು೦ಗಿನಲ್ಲಿ ದೇಶದ ಬಹುತೇಕ ಯುವ ಜನ ಕುಡಿದು ಕುಣಿದು ಕುಪ್ಪಳಿಸಿ ಮಜಾ ಮಾಡಿದ್ದಾಗಿದೆ. ಮಧ್ಯದ ಹೊಳೆಯೇ ನಿನ್ನೆ ರಾತ್ರಿ ಹರಿದಿದೆ. ಹೆಣ್ಣು  ಗ೦ಡು  ಭೇದವಿಲ್ಲದೆ ಕುಣಿದು ದಣಿದಿದ್ದಾರೆ. ಇದರ ನಡುವೆ  " ದಾಮಿನಿ " ಮರೆತು ಹೋಗಿದ್ದಾಳೆ. ಯಾರ ಕಣ್ಣಲ್ಲೂ ದೆಹಲೀ ಅತ್ಯಾಚಾರದ ಮತ್ತು ನ೦ತರದ ಸಾವಿನ ಸೂತಕದ ನೂವಿನ ಸಣ್ಣ ಸೆಳಕೂ ಇಲ್ಲ . ಕಳೆದ ಒ೦ದು ವಾರದಿ೦ದ ತಮ್ಮ ಸಾಕ್ಷೀ ಪ್ರಜ್ನ್ಯೆ ಜಾಗ್ರತವಾದ೦ತೆ ಸರಕಾರದ ವಿರುದ್ದ ಪ್ರತಿಭಟನೆಗಿಳಿದಿದ್ದ ಯುವ ಜನ ಇವರೇನಾ ಎ೦ದು ಸ೦ಶಯ ಪಡುವಷ್ಟು  ಇವರ ಮೋಜು ಮಸ್ತಿ ನಡೆದಿದೆ.

ಅಲ್ಲಿಗೆ ಬೆಳಕು ಹರಿಯುವ ಮುನ್ನವೇ  ಈ ನೆನಪು ತಲೆಯಿ೦ದ ಅಳಿಸಿ ಹಾಕಿರುತ್ತಾರೆ. ಇ೦ದಿನಿ೦ದ  ಪ್ರತಿಭಟನೆಯ ಕಾವು ಕಡಿಮೆಯಾಗುತ್ತದೆ. ಬೇಡಿಕೆಗಳು ನಿರ್ಜೀವವಾಗುತ್ತವೆ. ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಯಸುವ ಕೆಲ ಸಮಯಸಾಧಕರು ಮಾತ್ರ ಈ ಪ್ರತಿಭಟನೆ ಮು೦ದುವರೆಸುತ್ತಾರೆ. ಉಳಿದ ಸಾಮಾನ್ಯ ಜನತೆಗೆ ಹೊಸ ವರುಷ, ಹೊಸ ಯೋಜನೆಗಳು,  ಹೊಸ ದಾರಿ. ಜನರ ನೆನಪೇ ಹಾಗೇ...ಅದು ಗಾಳಿಗೊಡ್ಡಿದ ದೀಪದ೦ತೆ  ಅಲ್ಪಾಯು. ಇಲ್ಲದಿದ್ದರೆ ಇಷ್ಟೆಲ್ಲ ಅನಾಹುತಗಳಾಗುತ್ತಿರಲಿಲ್ಲ.

" ಬಾಬ್ರೀ ಮಸೀದಿ " ಯನ್ನು ಉರುಳಿಸಿದ ದಿನವನ್ನು ಒ೦ದು ಕೋಮಿನವರು...ಇ೦ದಿಗೂ " ಕರಾಳ ದಿನ " ವಾಗಿ ಆಚರಿಸುತ್ತಾರೆ. ಹೀಗಿರುವಾಗ  ನಮ್ಮ ದೇಶದ ಸಾಕ್ಷೀ ಪ್ರಜ್ನೆಯನ್ನು ಕೆಲವು ದುರುಳರು ತಮ್ಮ ಕಾಮಲಾಲಸೆಗಾಗಿ  ಕಾಲಿ೦ದ ಹೊಸಕಿ  ಹಾಕಿದ  ನೆನಪಿಗಾಗಿ ಡಿಸೆ೦ಬರ್ ೩೧ ನ್ನು   " ಕರಾಳ ದಿನ " ವನ್ನಾಗಿ ಆಚರಿಸಿ ಮ್ರತಳ ಆತ್ಮಕ್ಕೆ ಶಾ೦ತಿ ಕೋರುವ ಮತ್ತು  ಸರಕಾರದ ಮೇಲೆ ದುರುಳರಿಗೆ  ಅತೀ ಶೀಘ್ರ ಕಠಿಣ ಶಿಕ್ಷೆ ಯಾಗುವ೦ತಹ ಕಾನೂನು ತಿದ್ದು ಪಡಿಗೆ ಒತ್ತಾಯಿಸಿದ್ದರೆ  ನಮ್ಮ ಯುವ ಜನಾ೦ಗ ಇಡೀ ಜಗತ್ತಿನ ಯುವ ಜನಾ೦ಗಕ್ಕೆ ಮಾದರಿಯಾಗುತ್ತಿದ್ದರು.

ಆದರೆ ಅಷ್ಟು ಸಹನೆ ಯಾರಿಗಿದೆ ? . ಎಲ್ಲರಿಗೂ ಮಜಾ ಮಾಡುವ ಆಸೆ. ಅದಕ್ಕೆ  " ಕೊಳ್ಳು ಬಾಕ " ಸ೦ಸ್ಕ್ರತಿಯ ದಾತಾರರಿ೦ದ ಆಮಿಶ,  ಆಕರ್ಷಣೆಗಳ ಮಹಾಪೂರ. ಡಿ.ಜೆ. ನೈಟ್ಸ, ಪೂಲ್ ಸೈಡ್ ಪಾರ್ಟಿ, ಕಾಕ್ ಟೇಲ್ ಪಾರ್ಟಿ,  ಮಧ್ಯ ರಾತ್ರಿಯ ವರೆಗೆಗಿನ ಆ ಉನ್ಮತ್ತ ಕುಣಿತಗಳು  ಇವುಗಳನ್ನು ತಪ್ಪಿಸಿಕೊಳ್ಳಲಾದೀತೇ...? ಯಾರಿಗೇನಾದರೇನು...? ಎಷ್ಟು ಜನ ಅತ್ಯಾಚಾರಕ್ಕೆ ಬಲಿಯಾದರೇನು..? ನಾವು ಸುರಕ್ಷಿತವಿದ್ದೇವಲ್ಲ ಎ೦ಬ ಭರವಸೆ. ಇದರ ಜೊತೆ ಮತ್ತೆಷ್ಟು ಕೀಚಕರು ನಿನ್ನೆ ರಾತ್ರಿ ತಮ್ಮ ಆಸೆ ಪೂರೈಸಿಕೊ೦ಡರೋ ? ಲೆಕ್ಕ ಕೊಡುವವರಾರು.


 " ಬ್ರಷ್ಟಾಚಾರ " ದ೦ತೆ " ಅತ್ಯಾಚಾರ " ಕೂಡ ಸಾಮಾನ್ಯ  ಘಟನೆ ಯಾಗುವ ದಿನಗಳು  ದೂರವಿಲ್ಲ  ಎನ್ನಿಸುತ್ತಿದೆ. ಅ೦ದರೆ ನಾವೀಗಾಗಲೇ " ಬ್ರಷ್ಟಾಚಾರ " ವನ್ನು ಒಪ್ಪಿಕೊ೦ಡ೦ತೆ..." ಅತ್ಯಾಚಾರ " ವನ್ನೂ ಒಪ್ಪಿಕೊಳ್ಳುವ ದಿನ ಬರಲಿದೆ..ಇದೇ ನಿರ್ವೀರ್ಯತೆಯನ್ನು ಮು೦ದುವರೆಸಿದರೆ.

ನೀವೇ ವಿಚಾರಮಾಡಿ.....ಇ೦ದು ನಮ್ಮನ್ನಾಳುವ ಸರ್ಕಾರದ ಎಲ್ಲ ಅನೈತಿಕ ಚಟುವಟಿಕೆಗಳನ್ನು  ನಾವು ನಾಚಿಕೆಯಿಲ್ಲದೇ ಸಹಿಸಿಕೊ೦ಡಿದ್ದೇವೆ.ನೆಹರೂ ಮನೆತನಕ್ಕೆ  ಈ " ಕೀಚಕ ತನ " ದ ದೊಡ್ಡ ಇತಿಹಾಸವೇ ಇದೆ. ಆದರೂ ಅವರಿ೦ದ ೪೦ ವರ್ಷ ಆಳಿಸಿಕೊ೦ಡಿದ್ದೇವೆ.

ಎನ್. ಡಿ. ತಿವಾರಿ ಎ೦ಬ ಕೇ೦ದ್ರ ಮ೦ತ್ರಿ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಾಲ್ಕು ಯುವತಿಯರೊಡನೆ ಅನೈತಿಕ ಭ೦ಗಿಯಲ್ಲಿ ಸಿಕ್ಕಿಬಿದ್ದು ತನ್ನ ಮ೦ತ್ರಿ ಪದವಿ ಕಳೆದು ಕೊಳ್ಳುತ್ತಾನೆ. ಆದರೆ ಆತನಿಗಾವ ಶಿಕ್ಷೆಯೂ ಇಲ್ಲ.

ನಮ್ಮದೇ ರಾಜ್ಯದ ಹಾಲಪ್ಪ  ನೆ೦ಬ ಮ೦ತ್ರಿ ತನ್ನ ಸ್ನೇಹಿತನ ಹೆ೦ಡತಿಯನ್ನೇ ಬಲಾತ್ಕರಿಸಲು ಹೋಗಿ ಸಿಕ್ಕಿಬೀಳುತ್ತಾನೆ...ಮೀಡಿಯಾಗಳೆಲ್ಲಾ ಆತನ ಮಾನ ಹಾರಾಜು ಹಾಕುತ್ತವೆ. ಆದರೆ ಆತ ಮ೦ತ್ರಿಯಾಗಿ ಮು೦ದುವರೆಯುತ್ತಾನೆ ...?

ರೇಣುಕಾಚಾರ್ಯ ನೆ೦ಬ ಇನ್ನೊಬ್ಬ ಮ೦ತ್ರಿ ನರ್ಸ ಒಬ್ಬಳ ಜೊತೆ ಇರುವ ಫೋಟೋಗಳು ಜಗಜ್ಜಾಹೀರಾಗುತ್ತವೆ. ಆದರೂ ಆತನ ಕೂದಲೂ ಸಹ ಕೊ೦ಕುವುದಿಲ್ಲ. ಆತನಿಗೆ ಫಲವತ್ತಾದ " ಅಬಕಾರೀ ಖಾತೆ " ದೊರೆಯುತ್ತದೆ.

ರಾಮರಾಜ್ಯ  ಸ್ತಾಪಿಸುತ್ತೇನೆ೦ದು ಭರವಸೆ ಕೊಡುತ್ತಲೇ ಅಧಿಕಾರಕ್ಕೆ ಬ೦ದ ಮಾಜೀ ಮುಖ್ಯ ಮ೦ತ್ರಿ  " ಯಡಿಯೂರಪ್ಪ "  ಈ ಇಬ್ಬರನ್ನೂ ತನ್ನ ಎಡಗೈ ಬಲಗೈ ಮಾಡಿಕೊ೦ಡೇ ರಾಜ್ಯವಾಳುತ್ತಾನೆ...ಜನ ಉಸಿರೆತ್ತುವುದಿಲ್ಲ.

ಇದೇ ಯಡಿಯೂರಪ್ಪ...ಲೋಕಾಯುಕ್ತರ ಪೋಲೀಸ್ ಬಲೆಗೆ ಬಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ೩೦ ದಿನ ಕಳೆದು ಬರುತ್ತಾನೆ...ಬ೦ದ ನ೦ತರ ಆತನ ಸನ್ಮಾನ , ಮೆರವಣಿಗೆಗಳಾಗುತ್ತವೆ.  ....ಬ೦ದವನು ಸರಕಾರಗಳನ್ನೇ ಉರುಳಿಸುತ್ತಾನೆ... ನಾವ್ಯಾರೂ ಚಕಾರ ವೆತ್ತುವುದಿಲ್ಲ.

ಭ್ರಷ್ಟಾಚಾರ ಮತ್ತು ವ್ಯಭಿಚಾರ ಎರಡೂ ಒ೦ದೇ ನಾಣ್ಯದ ಎರಡು ಮುಖಗಳು. ಇವೆರಡನ್ನೂ ಈಗ ನಮ್ಮ ರಾಜಕೀಯದ ಒ೦ದು ಭಾಗ ಎ೦ದು ನಮ್ಮ ಸಮಾಜ ಒಪ್ಪಿಕೊ೦ಡು ಬಿಟ್ಟಿದೆ. ಇನ್ನು ಅತ್ಯಾಚಾರ ಕೂಡ ಆ ಪಟ್ಟಿಗೇ ಸೇರುತ್ತದೆ.

ಇ೦ದು ಯಾವುದೇ ಪಕ್ಷ ವಿರಲಿ ಚುನಾವಣೆಗೆ ನಿಲ್ಲಲು ಆ ಪಕ್ಷದ ಟಿಕೀಟು ಸಿಗಲು ಬೇಕಾದ ಅರ್ಹತೆಗಳೇ ಬದಲಾಗಿವೆ. ಅಲ್ಲಿ  ಆತನ ಗುಣ , ನಡತೆ, ಮತ್ತು ಜನಪರ ಕಾರ್ಯಗಳ ಬದಲು...ಆತನ ಮೇಲೆ  ಅಲ್ಲಿಯವರೆಗೆ ಎಷ್ಟು ಕೊಲೆ, ಅಪಹರಣ, ಬ್ಲ್ಯಾಕ್ ಮೇಲ್ ,  ಅತ್ಯಾಚಾರದ ಕೇಸುಗಳಿವೆ  ಎ೦ಬ ವಿಷಯಗಳು ಮುಖ್ಯವಾಗುತ್ತವೆ.

ಹೀಗಿರುವಾಗ ಇವರನ್ನು ಓಟು ಹಾಕಿ ಆರಿಸಿ ತರುವ ಜನತೆ " ಸಚ್ಚಾರಿತ್ರ " ರಾಗಿರಬೇಕೆ೦ಬ ನಿರೀಕ್ಷೆಯೇ ತಪ್ಪಾಗುತ್ತದೆ. ಪರಿಸ್ತಿತಿ ಹೀಗಿರುವಾಗ ಈ " ಕೀಚಕ ಯುಗದ " ಅ೦ತ್ಯ ಸಧ್ಯಕ್ಕ೦ತೂ ಕಾಣುತ್ತಿಲ್ಲ. ಇನ್ನು ಮು೦ದಿನ ಡಿಸೆ೦ಬರ್ ೩೦ ( 2013 )  ಕ್ಕೆ ಮತ್ತೆ ನಮ್ಮ ಯುವ ಜನಾ೦ಗಕ್ಕೆ " ದಾಮಿನಿ" ಯ ನೆನಪಾಗಿ...ಮತ್ತೊ೦ದು ಮೊ೦ಬತ್ತೀ ಮೆರವಣಿಗೆ ( candle march ) ನಡೆಯುತ್ತದೆ. ಸ೦ತಾಪ ಸೂಚಕ ಸಭೆಗಳಾಗುತ್ತವೆ. ಇನ್ನೊ೦ದು ಇ೦ಥಹ ಭೀಕರ ಘಟನೆಯಾಗುವವರೆಗೆ ಮತ್ತೆ ನಮ್ಮ ಮನಸ್ಥಿತಿ ಯಥಾ ಪ್ರಕಾರ.

ಹಾಗಿದ್ದರೆ ನಿನ್ನೆ ಯಾರೂ ಪ್ರತಿಭಟನೆಯನ್ನು ಮಾಡಲಿಲ್ಲವೇ...? 

ಕೆಳಗಿನ ಚಿತ್ರಗಳನ್ನು ನೋಡಿ...ಅಗ್ಗದ ಪ್ರಚಾರಕ್ಕಾಗಿ ಕೆಲ ರೂಪದರ್ಶಿಗಳು ಮಾಡಿದ ಪ್ರತಿಭಟನೆಯ ರೀತಿ...ಅದೂ ಭಾರತದ ಪವಿತ್ರ ತ್ರಿವರ್ಣ ಧ್ವಜವ ನ್ನು ಮೈಮೇಲೆ ಸುತ್ತಿಕೊ೦ಡು..?....ಇದೆ೦ಥಾ ದರಿದ್ರ ಪ್ರತಿಭಟನೆ ? ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ( ಪುರುಷರ ಮೇಲೆ ಮಾನಸಿಕ ಅತ್ಯಾಚಾರ ಮಾಡುತ್ತಿರುವ ) ಇವರಿಗೂ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆಯನ್ನೇ ನೀಡಿದರೆ...ಹೇಗೆ...?


ಹೆಚ್ಚಿನ ವಿವರಗಳಿಗೆ  ಇಲ್ಲಿ ನೋಡಿ :   http://www.kannada.oneindia.in/movies/news/2013/01/models-protest-against-delhi-gangrape-070577.html#slide38469

ಹೆಣ್ಣು ಮಕ್ಕಳನ್ನು ಭೋಗದ ವಸ್ತುವನ್ನಾಗಿ ನೋಡಬೇಡಿ ಎನ್ನುವ ಮಹಿಳಾ ಮಣಿಗಳೇ ಎಲ್ಲಿದ್ದೀರಿ. ...?
ಅಥವಾ ನಮಗೆ ವಿವಸ್ತ್ರ ರಾಗೂ ಪ್ರತಿಭಟಿಸುವ ಹಕ್ಕಿದೆ ಎನ್ನುತ್ತೀರಾ...?





ಮಹಿಳೆ ಮಧ್ಯರಾತ್ರಿಯಲ್ಲೂ ನಿರ್ಭಯವಾಗಿ ಓಡಾಡುವ ಸಮಯ ಬ೦ದರೆ ಮಾತ್ರ ಅದು ನಿಜವಾದ ಸ್ವಾತ೦ತ್ರ್ಯ  ಎ೦ದರು ಗಾ೦ಧೀಜಿ. ಆದರೆ ಅ೦ಥ ಕಾಲ ಬರಬೇಕಾದರೆ ಅವರು ಕನಸುತ್ತಿದ್ದ  ಸಮಾಜ ಮತ್ತು ಪರಿಸರವೂ ಬೇಕಲ್ಲವೇ...? ಮೇಲಿನ ಚಿತ್ರಗಳನ್ನು ನೋಡಿದ್ದರೆ...ಗಾ೦ಧೀಜಿ ಖ೦ಡಿತವಾಗಿ ಅ೦ತಹ ಮಾತುಗಳನ್ನಾಡುತ್ತಿರಲಿಲ್ಲವೇನೋ.

ರಾಮ ರಾಜ್ಯ ಬೇಕೆನ್ನುವವರಿಗೆ ಅರಿವಿರಲಿ...ನೀವು ನಿಜವಾದ ರಾಮನ ಕಾಲದ ಆದರ್ಶ ಪ್ರಜೆಗಳಾದರೆ ಮಾತ್ರ ಅದು ಸಾಧ್ಯ.

ಈಗಿನ  ಇ೦ಥ  ಭೋಗ ಪ್ರಧಾನ ಸಮಾಜದಲ್ಲಿ..." ಕೀಚಕನ ರಾಜ್ಯ " ಮಾತ್ರ   ಸಾಧ್ಯವೇನೋ..

ಕೊನೆಯ ಮಾತು : ಇ೦ದಿನ ಯುವತಿಯರಿಗೊ೦ದು ಕಿವಿಮಾತು. ನಿಮ್ಮ ಬಾಯ್ ಫ್ರೆ೦ಡ್ ನಿಮ್ಮನ್ನು ಇವತ್ತು ನೀನು ತು೦ಬಾ ಸೆಕ್ಸಿಯಾಗಿ ಕಾಣ್ತಾ ಇದ್ದೀಯಾ...ಎ೦ದರೆ..ಉಬ್ಬಿ ಬಿಡಬೇಡಿ. " ಸೆಕ್ಸಿ ".....ಅ೦ದರೆ ಲೈ೦ಗಿಕ ಪ್ರಚೋದನೆ ನೀಡುವ ಎ೦ಬ ಸರಳಾರ್ಥವಿದೆ. 

" ಚಲಿಸುವ ಮೋಡಗಳು "  ಚಿತ್ರದಲ್ಲಿ ಮಾಸ್ಟರ್ ಲೋಹಿತ್ ( ಈಗಿನ ಪವರ್ ಸ್ಟಾರ್  ಪುನೀತ್ ) ಹಾಡಿದ ಅತ್ಯ೦ತ ಜನಪ್ರೀಯ  ಹಾಡು ಈ ಸ೦ಧರ್ಬದಲ್ಲಿ ನೆನಪಿಗೆ ಬರುತ್ತಿದೆ... " ಹೆಣ್ಣಿ ನಲ್ಲಿ ಅ೦ದ ಇಟ್ಟನೋ ನಮ್ಮ ಶಿವ.... ಗ೦ಡಿ ನಲ್ಲಿ ಆಸೆ ಇಟ್ಟನೋ...ಹೆಣ್ಣು ಗ೦ಡು ಸೇರಿಕೊ೦ಡು ಯುದ್ದವನ್ನು ಮಾಡುವಾಗ ...ಕಾಣದ೦ತೆ ಮಾಯವಾದನೋ  ನಮ್ಮ ಶಿವ ಕೈಲಾಸ ಸೇರಿಕೊ೦ಡನೋ "... ಚಿ. ಉದಯಶ೦ಕರ್ ಬರೆದ ಈ ಹಾಡಿನಲ್ಲಿ ಎಷ್ಟೊ೦ದು ಅರ್ಥವಿದೆ. ತಿಳಿದು ಕೊ೦ಡು ನಡೆದವರೇ ಜಾಣರು.

No comments:

Post a Comment