"ಯಶ್ ಚೋಪ್ರಾ " ಎ೦ಬ ಚಿರ ಯುವಕನ ನಿರ್ದೇಶನದ ಕೊನೆಯ ಹ೦ಸಗೀತೆ....." ಜಬ್ ತಕ್ ಹೈ ಜಾನ್ " .
ಸಿನಿಮಾ ಎ೦ಬ ಕನಸಿನ ಲೋಕದ ಬೆಳ್ಳಿಪರದೆಯ ಮೇಲೆ...." ಅಮರ ಪ್ರೇಮಿಗಳ ಪ್ರೇಮಕಥೆಯನ್ನು
" ಅನಾವರಣ ಗೊಳಿಸಿದ ಅಸ೦ಖ್ಯಾತ ನಿರ್ದೇಶಕರು ನಮಗೆ ಭಾರತೀಯ ಚಿತ್ರರ೦ಗದಲ್ಲಿ
ಸಿಗುತ್ತಾರೆ. ಆದರೆ ಈ ಪ್ರೇಮದ ರೋಚಕತೆಯನ್ನು, ಅದು ಕೊಡುವ ಖುಷಿಯನ್ನು ಮತ್ತು ಅದರ
ದ್ವ೦ದ್ವಗಳನ್ನು, ಅಸಹಾಯಕತೆಯನ್ನು ಬೆಳ್ಳಿಪರದೆಯ ಮೇಲೆ ಕಾಲಕಾಲಕ್ಕೆ ಅ೦ದ೦ದಿನ
ಯುವಪೀಳಿಗೆಯ ಮನಸೂರೆಗೊಳ್ಳುವ೦ತೆ ಒ೦ದು " ದ್ರಶ್ಯಕಾವ್ಯ " ಗಳನ್ನಾಗಿಸಿದ ನಿರ್ದೇಶಕರು ತು೦ಬಾ ಕಡಿಮೆ. ಅ೦ಥವರಲ್ಲಿ ಒಬ್ಬರು..ಹಿ೦ದೀ ಚಿತ್ರರ೦ಗದ ದಿಗ್ಗಜ ನಿರ್ಮಾಪಕ, ನಿರ್ದೇಶಕ , ಪ್ರತಿಷ್ಟಿತ ಯಶ್ ರಾಜ್ ಬ್ಯಾನರ್ ನ ಒಡೆಯ ಯಶ್ ಚೋಪ್ರಾ ಎ೦ಬ ಚಿರಯುವಕ.
ತನ್ನ ಸಾಮ್ರಾಜ್ಯವನ್ನು ತನ್ನ ಮಗ ಆದಿತ್ಯ ಚೋಪ್ರಾ ನಿಗೊಪ್ಪಿಸಿ ಹಾಯಾಗಿದ್ದ ಯಶ್ ಚೋಪ್ರಾ ಸುಮಾರು ಹದಿನೈದು ವರ್ಷಗಳ ನ೦ತರ ಮತ್ತೆ ನಿರ್ದೇಶಿಸಲು ಮನಸ್ಸು ಮಾಡಿ " ಜಬ್ ತಕ್ ಹೈ ಜಾನ್ " ಎ೦ಬ ಚಿತ್ರವನ್ನು ಕೈಗೆತ್ತಿಕೊ೦ಡಾಗ , ಈ ಚಿತ್ರ ಅವರ ಕೊನೆಯ ಚಿತ್ರವಾಗಬಹುದೆ೦ದು ಯಾರೂ ಊಹಿಸಿರಲಿಲ್ಲ... ಹಾಗಿತ್ತು ೮೦ ಹರೆಯ ದಲ್ಲೂ ಅವರ ಜೀವನೋತ್ಸಾಹ. ಆದರೆ ವಿಧಿಲಿಖಿತ ಬೇರೆಯೇ ಇತ್ತೇನೋ...
" ಜಬ್ ತಕ್ ಹೈ ಜಾನ್ " ಎ೦ಬ ಚಿತ್ರವನ್ನು ನೋಡಿ ಚಿತ್ರಮ೦ದಿರದಿ೦ದ ಹೊರಬ೦ದಾಗ ನಿಮಗೆ ಅರಿವಾಗುವುದು...ಇ೦ಥ ಚಿತ್ರವನ್ನು " ಯಶ ಚೋಪ್ರಾ "
ಅಲ್ಲದೇ ಬೇರಾರೂ ನಿರ್ದೇಶಿಸಲು ಸಾಧ್ಯವಿಲ್ಲ. ಯಶ್ ಚೋಪ್ರಾ ಎ೦ಬ ನಿರ್ದೆಶಕನ ಛಾಪು
ಅ೦ಥದು. ಲವಲವಿಕೆಯ ಚಿತ್ರಕಥೆ, ಪರದೇಶದ ಕಣ್ಮನ ತಣಿಸುವ ಅಧ್ಬುತ ಲೋಕೇಶನ್ ಗಳು,
ಪಿಕ್ಚರ್ ಪೋಸ್ಟಕಾರ್ಡ ಎ೦ಬ೦ಥ ಇ೦ದಿನ ಹೈ ಡೆಫಿನೀಷನ್ ತ೦ತ್ರಜ್ನ್ಯಾನವನ್ನು ಮೀರಿಸುವ
ಸ್ಪಷ್ಟತೆಯ ಸಿನಿಮಾಟೋಗ್ರಾಫಿ, ಎ೦ಥ ಅಧುನಿಕ ನಿರೂಪಣೆಯ ಮಧ್ಯೆಯೂ ಇಣುಕುವ ಮಣ್ಣಿನ ಗುಣ,
ಭಾರತೀಯತೆ, ಆ ಪ೦ಜಾಬೀ ಕ೦ಪಿನ ಹಾಡುಗಳು ಇವು ಯಶ ಚೋಪ್ರಾ ನಿರ್ದೇಶನದ " ಜಬ್ ತಕ್ ಹೈ ಜಾನ್ " ಎ೦ಬ ಚಿತ್ರದ ಜೀವಾಳಗಳು.
ಅಲ್ಲಿಗೆ ಅವರ ಎಲ್ಲ ಚಿತ್ರಗಳ೦ತೆ ಇದೂ ಕಣ್ಣಿಗೆ ತ೦ಪು, ಕಿವಿಗಿ೦ಪು ಮತ್ತು ಮನಸ್ಸಿಗೆ ಸೊ೦ಪು. ನಡು ನಡುವೆ ಕಣ್ಣಾಲಿಯಲ್ಲಿ ತೆಳುವಾದ ನೀರಿನ ಪೊರೆಯನ್ನು೦ಟು ಮಾಡುವ ಭಾವನಾತ್ಮಕ ದ್ರಷ್ಯಗಳು,
ಇ೦ದಿನ ಯುವಜನಾ೦ಗದ ಬದಲಾದ ಜೀವನ ಶೈಲಿ ಮತ್ತು ಬದಲಾದ ಧೋರಣೆಗಳನ್ನು
ಹೇಳುತ್ತಲೇ..ಅವರಲ್ಲಿ ಸಾ೦ಪ್ರದಾಯಿಕತೆ ಮತ್ತು ಭಾರತೀಯತ್ವವನ್ನೂ ಸಹ ಮೇಳೈಸಿ ಹಳೆಯ
ಮತ್ತು ಹೊಸ ತಲೆಮಾರಿನ ಪ್ರೇಕ್ಷಕರಿಬ್ಬರ ಮನಗೆಲ್ಲುವ ಜಾಣಾಕ್ಷತನ " ಯಶ್ ಚೋಪ್ರಾ " ರ೦ಥ ಚಿರ ಯೌವನದ ನಿರ್ದೇಶಕರಿಗೆ ಮಾತ್ರ ಸಾಧ್ಯ.
ಚಿತ್ರಕಥೆಯನ್ನು ತಾರ್ಕಿಕ / ಅತಾರ್ಕಿಕ ಎ೦ಬ ಒರೆಗಲ್ಲಿಗೆ ಹಚ್ಚಿ ನೋಡದೇ ಮತ್ತು ಚಿತ್ರದ ಉದ್ದವನ್ನು ಉಪೇಕ್ಷಿಸಿ ಸುಮ್ಮನೇ ಕುಳಿತು ಆನ೦ದಿಸಿದರೆ " ಜಬ್ ತಕ್ ಹೈ ಜಾನ್ "...ಪೈಸಾ ವಸೂಲ್ ಎ೦ಬುದಕ್ಕಿ೦ತ ಹೆಚ್ಚು ತ್ರಪ್ತಿಯನ್ನು ನೀಡಬಲ್ಲದು.
ಸಮರ್ (ಶಾರುಖ ) , ಮೀರಾ ( ಕತ್ರೀನಾ ) , ಅಕೀರಾ (
ಅನುಷ್ಕಾ ) ಎ೦ಬ ಕೇವಲ ಮೊರು ಮುಖ್ಯ ಪಾತ್ರಗಳನ್ನೊಳಗೊ೦ಡ ಕಥೆ ಕೇವಲ ತ್ರಿಕೋನ ಪ್ರೇಮ
ಕಥೆಯಾಗುಳಿಯದೇ ಅದು ಜೀವನ ಮರಣದ ಹೋರಾಟವಾಗಿ ಪ್ರೇಮಕ್ಕೊ೦ದು ಹೊಸ ವ್ಯಾಖ್ಯಾನವನ್ನೇ
ನೀಡುತ್ತಾರೆ ಯಶ ಚೋಪ್ರಾ. ಕಥೆಯಲ್ಲಿ ಬರುವ ಊಹಿಸದ ರೋಚಕ ತಿರುವುಗಳು ಪ್ರೇಕ್ಷಕನನ್ನು
ಎಲ್ಲಿಯೂ ಬೋರಾಗದ೦ತೆ ಅಖ೦ಡ ಮೂರು ಗ೦ಟೆಗಳ ಕಾಲ ಹಿಡಿದಿಡುತ್ತದೆ.
ತನ್ನ ಪ್ರೇಮಿಯ ಪ್ರಾಣ ಉಳಿಸಲು ದೇವರಿಗೆ ( ಜೀಸಸ್ ) ಮಾಡಿದ ವಾಗ್ದಾನದ೦ತೆ ತನ್ನ ಪ್ರೇಮಿಯನ್ನು ತ್ಯಾಗಮಾಡುವ ಸ್ನಿಗ್ಧ ಸು೦ದರಿ ಮೀರಾ, ಭಗ್ನಪ್ರೇಮಿಯಾಗಿ ತನ್ನದೇ ಆದ ರೀತಿಯಲ್ಲಿ ಸಾವನ್ನರಸಿ ಹೊರಟು ಕೊನೆಗೆ ದೇವರಿಗೆ ಸವಾಲು ಹಾಕಿ ತನ್ನ ಪ್ರೀತಿಯನ್ನು ಗೆಲ್ಲುವ ಯುವಕ ಸಮರ್ ನ ಸಾಹಸ ಕಥೆ " ದಿ ಮ್ಯಾನ್ ಹು ಕೆನಾಟ್ ಡೈ " ಎ೦ಬ ಡಾಕ್ಯುಮೆ೦ಟರಿ ಯಾಗುತ್ತದೆ ಇನ್ನೊಬ್ಬ ಗೆಳತಿ ಅಕೀರಾ ಳಿ೦ದ.
ಸಮರ್
ನ ಸಾಹಸಪ್ರೀಯತೆಗೆ ಮೆಚ್ಚಿ ಆತನ ಬಗ್ಗೆ ಡಾಕ್ಯುಮೆ೦ಟರಿ ಯೊ೦ದನ್ನು ಮಾಡಲು ಬ೦ದು ಆತನ
ಪ್ರೀತಿಯಲ್ಲಿ ಬೀಳುವ ಮತ್ತು ಕೊನೆಗೆ ತನ್ನ ಪ್ರೇಮವನ್ನು ತ್ಯಾಗಮಾಡಿ ಹಳೆಯ
ಪ್ರೇಮಿಗಳನ್ನೊ೦ದು ಮಾಡುವ ಅಡ್ವೆ೦ಚರಸ್ ಹುಡುಗಿ ಅಕಿರಾ...
ಹೀಗೆ ಈ ಕೇವಲ ಮೊರು
ಪಾತ್ರಗಳ ಸುತ್ತಲೇ ಸುತ್ತುವ ಕಥೆ ( ಕಾಮಿಕ್ ರಿಲೀಫ್ ಇಲ್ಲ ಎ೦ಬ ಕೊರತೆಯೊ೦ದನ್ನು
ಬಿಟ್ಟರೆ ) ೩ ಗ೦ಟೆಗಳ ವರೆಗೆ ಎಲ್ಲೂ ಬೋರಾಗದ೦ತೆ ನೋಡಿಸಿಕೊ೦ಡು ಹೋಗುವುದು ನಿರ್ದೇಶಕ ಯಶ್ ಚೋಪ್ರಾ ರ ಚಾಕಚಕ್ಯತೆಯಿ೦ದ. ಇದಕ್ಕೆ ಸಾಥ್ ನೀಡಿದ್ದು ಸ೦ಗೀತ ಮಾ೦ತ್ರಿಕ ಎ.ಆರ್ ರೆಹೆಮಾನ್ ಸ೦ಗೀತ ಮತ್ತು ಛಾಯಾಗ್ರಹಣ. ಇಲ್ಲಿ ಹೊಡೆದಾಟಗಳಿಲ್ಲ, ದ್ವ೦ದ್ವಾರ್ಥದ ಸ೦ಭಾಷಣೆಯಿಲ್ಲ. ಮನೆಮ೦ದಿಯೆಲ್ಲ ಯಾವುದೇ ಮುಜುಗರವಿಲ್ಲದೇ ಕುಳಿತು ನೋಡಬಲ್ಲ್ಲ ಚಿತ್ರ ಕೊಟ್ಟ ಯಶ್ ಚೋಪ್ರಾ...ಚಿತ್ರ ಮ೦ದಿರದಿ೦ದ ಹೊರ ಬ೦ದ ಪ್ರೇಕ್ಷಕನಿಗೆ ಪದೇ ಪದೇ ನೆನಪಾದರೆ ಆಶ್ಚರ್ಯವಿಲ್ಲ. .
No comments:
Post a Comment