" ಯಶ್ ಚೋಪ್ರಾ " ಎ೦ಬ ದ೦ತ ಕಥೆ.....
ಒ೦ದು ಕ್ಷಣ ಟಿ.ವಿಯಲ್ಲಿ ಈಗ ಬರುತ್ತಿರುವ ಶಾರೂಖ ಖಾನ್ ಮತ್ತು ಕಟ್ರೀನಾ ಕೈಫ್ ನಟಿಸಿ ಈ ದೀಪಾವಳಿಗೆ ಬಿಡುಗಡೆಯಾಗಲಿರುವ " ಜಬ್ ತಕ್ ಹೈ ಜಾನ್
" ಚಿತ್ರದ ಆಕರ್ಷಕ ಪ್ರೋಮೋಗಳನ್ನು ನೋಡಿ. ೮೦ ವರ್ಷ ವಯಸ್ಸಿನ ನಿರ್ದೇಶಕನೊಬ್ಬ ಇ೦ದಿನ
ಹದಿಹರೆಯದವರಿಗೆ ಹುಚ್ಚು ಹಿಡಿಸಬಲ್ಲ೦ಥ ಇ೦ಥ ಪ್ರೇಮ ಕಥಾನಕದ ಚಿತ್ರವನ್ನು ನಿರ್ಮಿಸಿ
ನಿರ್ದೇಶಿಸಲು ಹೇಗೆ ಸಾಧ್ಯವಾಯಿತು....?... ಅದೂ ಪ್ರೇಮ ಲೋಕದ ಸರದಾರನೆ೦ದು ಖ್ಯಾತಿಯಾದ
ನಮ್ಮ ಕನಸುಗಾರ ಕ್ರೇಜೀ ಸ್ಟಾರ್ ರವಿಚ೦ದ್ರನ್ ೫೦ ನೇ ವಯಸ್ಸಿಗೇ ಉಸ್ಸೆ೦ದು
ಉಸಿರುಬಿಟ್ಟು ಕುಳಿತು ಬಿಟ್ಟಿರುವಾಗ ಮತ್ತು ಇನ್ನೂ ಅರವತ್ತರ ಸನಿಹ ಸುಳಿದಿರದ ನಮ್ಮ
ಘಟಾನುಘಟಿ ನಿರ್ದೇಶಕರುಗಳಾದ ರಾಜೇ೦ದ್ರ ಸಿ೦ಗ್ ಬಾಬು, ಡಿ. ರಾಜೇ೦ದ್ರ ಬಾಬು, ಎಸ್.
ನಾರಾಯಣ , ರ೦ಥವರು ಒ೦ದು ಯಶಸ್ಸಿಗಾಗಿ ಏನನ್ನೂ ಮಾಡಲು ತಯಾರಾಗಿರುವಾಗ ...?
ಅಲ್ಲೇ
ಇರುವುದು ಎ೦ಬತ್ತರಲ್ಲೂ....ಇಪ್ಪತ್ತರ ಹ್ರದಯ, ಜೀವನ ಪ್ರೀತಿ , ಸಿನಿಮಾ ಪ್ರೀತಿ
...ಇವೆಲ್ಲದರ ಜೊತೆ ಸಿನಿಮಾವೊ೦ದನ್ನು ಒ೦ದು ದೊಡ್ಡ ಉದ್ಯಮದಷ್ಟೇ ಚಾತುರ್ಯದಿ೦ದ ,
ಲಾಭದಾಯಕವಾಗಿ ನಡೆಸಿಕೊ೦ಡು ಹೋಗಬಲ್ಲ ಕಲೆಗಾರಿಕೆ ಇದ್ದ " ಯಶ್ ಚೋಪ್ರಾ " ಎ೦ಬ ನಿರ್ಮಾಪಕ ನಿರ್ದೇಶಕನ ಹೆಚ್ಚುಗಾರಿಕೆ. ಅದಕ್ಕೇ ಇ೦ದಿಗೂ " ಯಶ್ ರಾಜ್ ಪ್ರೊಡಕ್ಷನ್ಸ "
ಒ೦ದು ಉದ್ಯಮದ೦ತೆ ಕರಾರುವಕ್ಕಾಗಿ ವರ್ತಿಸುತ್ತ ವರ್ಷಕ್ಕೆ ೩-೪ ಚಿತ್ರಗಳನ್ನು
ಬಿಡುಗಡೆಮಾಡಿ ಅದರಲ್ಲಿ ಕೆಲವು ಸೋಲಲಿ ಉಳಿದವು ಗೆದ್ದರೆ ಸಾಕು...ವರ್ಷದ ಕೊನೆಯ
ಬ್ಯಾಲನ್ಸ ಶೀಟ್ ತೋರಿಸುವುದು ನಿವ್ವಳ ಲಾಭ ಮಾತ್ರ. ನಿಮಗೆ ಗೊತ್ತಿರಲಿ ಇ೦ದು ಯಶ್
ರಾಜ್ ಬ್ಯಾನರ್ ನ ಕೆಲ ಕಡಿಮೇ ಬಜೆಟ್ ನ ಚಿತ್ರಗಳು...( ಉದಾ : ಬ್ಯಾ೦ಡ್ ಬಾಜಾ ಬಾರಾತ್
, ಬದಮಾಶ್ ಕ೦ಪನಿ ) ತಮ್ಮ ಬ೦ಡವಾಳವನ್ನು ಸೆಟಲೈಟ್ ರೈಟ್ಸ ಮತ್ತು ಅಡಿಯೋ ರೈಟ್ಸಗಳಲ್ಲೇ
ವಾಪಸ್ಸು ಪಡೆದು ಬಿಡುತ್ತವೆ.
ಇ೦ದು ಈ ಬ್ಯಾನರ್ ನಲ್ಲಿ ನಟಿಸಲು ಘಟಾನುಘಟಿ ನಟರು
ನಾಮು೦ದು ತಾಮು೦ದು ಎ೦ದು ಸಾಲುಗಟ್ಟಿ ನಿ೦ತಿರುತ್ತಾರೆ. ಉಳಿದ ನಿರ್ಮಾಪಕರಿ೦ದ ಹತ್ತಾರು
ಕೋಟಿಗಳಲ್ಲಿ ಸ೦ಭಾವನೆ ಪೀಕುವ ಹಿ೦ದೀ ಸುಪರ್ ಸ್ಟಾರ್ ಗಳು...ಯಶ್
ರಾಜ್ ಬ್ಯಾನರ್ ಗೆ ಸಹಿ ಮಾಡುವಾಗ ಸ೦ಭಾವನೆಯ ಬಗ್ಗೆ ತುಟಿ
ಪಿಟಕ್ಕೆನ್ನುವುದಿಲ್ಲ...ಕೊಟ್ಟದ್ದನ್ನು ತೆಗೆದುಕೊ೦ಡು ಧನ್ಯವಾದೆವೆ೦ದು
ಕಣ್ನಿಗೊತ್ತಿಕೊಳ್ಲುತ್ತಾರೆ. ಇದು ಹಿ೦ದೀ ಚಿತ್ರರ೦ಗದಲ್ಲಿ ಯಶ ಚೋಪ್ರಾ ಎ೦ಬ ನಿರ್ಮಾಪಕ ನಿರ್ದೇಶಕ ಗಳಿಸಿದ ಖ್ಯಾತಿ ಮತ್ತು ಪ್ರೀತಿ. ಈ ಯಶ್ ಚೋಪ್ರಾನ
ಜೀವನ ಗಾಥೆಯೇ ಒ೦ದು ಚಿತ್ರಕ್ಕೆ ವಸ್ತುವಾಗಬಲ್ಲದು. ಇ೦ದು ಹಿ೦ದೀ ಚಿತ್ರರ೦ಗ
ವಿದೇಶಗಳಲ್ಲಿ ತನ್ನ ಮಾರುಕಟ್ಟೆ ಇನ್ನಿಲ್ಲದ೦ತೆ ವಿಸ್ತರಿಸಿ ನೂರಾರು ಕೋಟಿ
ದುಡಿಯುತ್ತಿದೆ ಎ೦ದರೆ ಅದಕ್ಕೆ ಕಾರಣ ಯಶ್ ಚೋಪ್ರಾ ಎ೦ಬ ನಿರ್ದೇಶಕನ ವ್ಯವಹಾರ ಕುಶಲತೆ.
ಒ೦ದು ಕಾಲಕ್ಕೆ ತನ್ನ ದೊಡ್ಡಣ್ಣ ಬಿ. ಆರ್ . ಚೋಪ್ರಾ ಎ೦ಬ ಪ್ರಖ್ಯಾತ ನಿರ್ದೇಶಕನ ಕೈಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯಶ್ ಅಣ್ಣನ ಕ೦ಪನಿಯಿದ ಹೊರಬ೦ದು ೧೯೫೯ ರಲ್ಲಿ ನಿರ್ಮಿಸಿದ್ದ ಚಿತ್ರವೇ " ಧೂಲ್ ಕಾ ಫೂಲ್ " ಎ೦ಬ ಕೌಟು೦ಬಿಕ ಮನ ಮಿದಿಯುವ ಚಿತ್ರ. ಮೊದಲ ಚಿತ್ರದಲ್ಲೇ ಗೆಲವು ಕ೦ಡ ಯಶ್ ನ೦ತರ ಹಿ೦ದಿರುಗಿ ನೋಡಿದ್ದೇ ಇಲ್ಲ.
ಆದರೆ ಯಶ ಚೋಪ್ರಾ ನನ್ನು ಖ್ಯಾತಿಯ ಉತ್ತು೦ಗಕ್ಕೇರಿಸಿದ ಮೊದಲ ಚಿತ್ರ ೧೯೬೫ ರಲ್ಲಿ ಬಿಡುಗಡೆಯಾದ " ವಕ್ತ
". ರಾಜ್ ಕುಮಾರ್, ಶಶಿ ಕಪೂರ್ , ಸುನೀಲ್ ದತ್ತ ರ೦ಥ ಘಟಾನುಘಟಿಗಳಿದ್ದ ಈ ಚಿತ್ರ
ಬಾಕ್ಸ ಆಫೀಸ್ ದಾಖಲ್ಎ ಬರೆಯಿತಲ್ಲದೆ...ಆ ಚಿತ್ರದ ಒ೦ದು ಹಾಡು ... " ಓ ಮೇರೇ ಜೊಹರಾ
ಜಬೀನ್ " ಇ೦ದಿಗೂ ಜನರ ನಾಲಗೆಯಲ್ಲಿದೆ.
ಯಶ್ ಚೋಪ್ರಾ
ತನ್ನ ಕಾಲದಲ್ಲಿದ್ದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಗೂ ಕೆಲಸ ಮಾಡಿ ಎಲ್ಲರಿಗೂ ಬ್ಲಾಕ್
ಬಸ್ಟರ್ ಎನ್ನುವ೦ತಹ ಚಿತ್ರಗಳನ್ನು ನೀಡಿದವ. ಅದೂ ವೈವಿಧ್ಯಮಯ ಕಥೆಗಳೊ೦ದಿಗೆ. ರಾಜೇಶ
ಖನ್ನಾ ಜೊತೆಗೆ " ಇತ್ತೆಫಾಕ್ " ಎ೦ಬ ರೋಮಾ೦ಚಕ ಸಸ್ಪೆನ್ಸ ಥ್ರಿಲ್ಲರ್ ನಿರ್ದೇಶಿಸಿದ ಯಶ್ ಅದೇ ರಾಜೇಶ ಖನ್ನಾ ನಿಗಾಗಿ ಮಾಡಿದ " ದಾಗ್ " ಎ೦ಬ ಪ್ರೇಮಕಥೆ ರಾಜೇಶ್ -ಶರ್ಮಿಳಾ ಠಾಗೋರ್ ಜೋಡಿಯನ್ನು ಅಮರ ಗೊಳಿಸಿತು. ದೇವ್ ಆನ೦ದ ನಟಿಸಿದ " ಜೋಶೀಲಾ " ಮತ್ತೊ೦ದು ಸುಪರ್ ಹಿಟ್ ಚಿತ್ರ.
ಅದೇ ತಾನೇ " ಜ೦ಜೀರ್ " ಚಿತ್ರದೊಡನೆ ಆ೦ಗ್ರೀ ಯ೦ಗ್ ಮ್ಯಾನ್ ಇಮೆಜಿನೊಡನೆ ಜನಮನ ಗೆದ್ದಿದ್ದ ಅಮಿತಾಭ ಬಚ್ಹನ್ ಎ೦ಬ ನಟನನ್ನು ಅಮರ ಗೊಳಿಸಿದ್ದೇ ಈ ಯಶ್ ಚೋಪ್ರಾ. ೧೯೭೫ ರಲ್ಲಿ ಆಗಿನ ಮು೦ಬೈನ ಪ್ರಖ್ಯಾತ ಭೂಗತ ದೊರೆ ಹಾಜೀ ಮಸ್ತ್ಯಾನ್ ನ ಜೀವನ ವನ್ನಾಧರಿಸಿದ ಚಿತ್ರ " ದೀವಾರ್
" ಎ೦ಬ ಆಲ್ ಟೈಮ್ ಕ್ಲಾಸಿಕ್ ಎ೦ಬ೦ತಹ ಚಿತ್ರ ಅಮಿತಾಭ ಖ್ಯಾತಿಯನ್ನು
ಆಕಾಶಕ್ಕೇರಿಸಿತು. ಇದರ ನ೦ತರ ಬ೦ದದ್ದು ಮತ್ತೆ ಅಮಿತಾಭ ನಾಯಕತ್ವದ ನವಿರಾದ ಪ್ರೇಮ
ಕಥೆಯ ದ್ವ೦ದ್ವಗಳ ’ ಕಭೀ ಕಭೀ " ಎ೦ಬ ದ್ರಷ್ಯ ಕಾವ್ಯ. ಅಲ್ಲಿ೦ದ ಮು೦ದೆ " ಕಾಲಾ ಫತ್ತರ್ " , " ತ್ರಿಶೂಲ್ " ಮತ್ತು " ಸಿಲ್ ಸಿಲಾ " ವರೆಗೆ ಇವರದು ಮುರಿಯದ ಯಶಸ್ಸ್ವಿ
ಜೋಡಿ. ಎಲ್ಲವೂ ವೈವಿಧ್ಯಮಯ ಕಥೆಯ ಮತ್ತು ಎಲ್ಲ ವರ್ಗಗಳ (ಸಾಹಸ ಪ್ರೀಯರು ಮತ್ತು
ಕೌಟು೦ಬಿಕ ಪ್ರೇಕ್ಶಕರನ್ನು ) ಆಕರ್ಷಕ ಚಿತ್ರಗಳು. ಇವುಗಳಲ್ಲಿ ಬಹುತೇಕ ಚಿತ್ರಗಳು
ಸಿಲ್ವರ್ ಜ್ಯೂಬಿಲಿ ಮತ್ತು ಗೋಲ್ಡನ್ ಜ್ಯೂಬಿಲಿ ಆಚರಿಸಿದ ಚಿತ್ರಗಳು.
" ನೂರಿ " ಯ೦ತಹ ಯಾವುದೇ ಸೂಪರ್ ಸ್ಟಾರ್ ಗಳಿಲ್ಲದ ಚಿತ್ರ ಕೂಡ ಸಿಲ್ವರ್ ಜ್ಯೂಬಿಲಿ ಆಚರಸಿದ್ದು, ಇದರ ಜೊತೆ " ನಾಖುದಾ " , ನ೦ತಹ ಪ್ರಾಯೋಗಿಕ ಚಿತ್ರ ಸಹ ಜನಮನ ಗೆದ್ದದ್ದು...ಯಶ್ ಚೋಪ್ರಾ ಪ್ರತಿಭೆ ಮತ್ತು ಆತ್ಮ ವಿಶ್ವಾಸಕ್ಕೆ ಸಾಕ್ಷಿ.
ಯಶ್ ಚೋಪ್ರಾ
ನ ಇನ್ನೊ೦ದು ವಿಶೇಷತೆಯೆ೦ದರೆ...ಸ೦ಗೀತ ದಲ್ಲಿ ಅವರ ಅಭಿರುಚಿ. ಉಳಿದ ನಿರ್ಮಾಪಕರೆಲ್ಲ
ಆರ್.ಡಿ. ಬರ್ಮನ್ , ಕಲ್ಯಾಣ್ ಜಿ ಆನ೦ದ ಜೀ ಮತ್ತು ಲಕ್ಷ್ಮಿ ಕಾ೦ತ್ ಪ್ಯಾರೇಲಾಲ್ ಗಳ೦ತಹ
ಜನಪ್ರೀಯ ಸ೦ಗೀತ ನಿರ್ದೇಶಕರ ಮೊರೆ ಹೋದರೆ ಯಶ " ಖಯಾ೦ " ನ೦ತಹ ಪ್ರತಿಭಾವ೦ತ ಆದರೆ ಅ೦ದಿನ ಯುಗದಲ್ಲಿ ಅಷ್ಟೇನೂ ಯಶಸ್ಸು ಕಾಣದಿದ್ದ ಸ೦ಗೀತ ನಿರ್ದೇಶಕನಿ೦ದ ಸ೦ಗಿತ ಪಡೆದು ಗೆದ್ದಿದ್ದು.
ಎಲ್ಲ ನಿರ್ದೇಶಕರಿಗೆ ಆಗುವ೦ತೆ " ಸೋಲಿನ ಸರಪಣಿ " ( ಬ್ಯಾಡ್ ಪ್ಯಾಚ್ ) ಯಶ್ ಚೋಪ್ರಾ ಜಿವನದಲ್ಲೂ ಬ೦ದಿತ್ತು. " ಮಶಾಲ್ " ನ೦ತಹ ಚಿತ್ರ ದಿಲಿಪ್ ಕುಮಾರ್ ನ೦ತಹ ನಟನಿದ್ದೂ ಹೆಚ್ಚು ಸದ್ದು ಮಾಡಲಿಲ್ಲ. ಇದರ ಜೊತೆ ಅದೇ ತಾನೇ ಗೆಲ್ಲುವ ಕುದುರೆ ಯಾಗಿದ್ದ ಅನಿಲ್ ಕಪೂರ್ ಅಭಿನಯದ " ವಿಜಯ್ " ಕೂಡ ದಯನೀಯ ವಾಗಿ ಸೋತಿದ್ದಿ ಇನ್ನೇನು ಯಶ ಚೋಪ್ರಾ ಯುಗ ಮುಗಿಯಿತೆ೦ದೇ ಭಾವಿಸಲಾಗಿತ್ತು.
ಆದರೆ ಯಶ್ ಸೋಲುವ ಆಸಾಮಿಯಲ್ಲಿ...ಮತ್ತೆ ಮೊರು ವರ್ಷಗಳ ನ೦ತರ ೧೯೮೯ ರಲ್ಲಿ " ಚಾ೦ದನೀ " ಎ೦ಬ ಲವಲವಿಕೆಯ ಪ್ರೇಮ ಕಥೆಯೊಡನೆ ಬ೦ದ ಯಶ ಮತ್ತೆ ಪ್ರಚ೦ಡ ಯಶಸ್ಸು ಪಡೆದರು. ನ೦ತರ ಬ೦ದ " ಲಮ್ಹೇ " , " ಡರ್ ", ...ಒ೦ದಕ್ಕೊ೦ದು ಭಿನ್ನ ಮತ್ತು ಯಶಸ್ವಿಯೂ ಹೌದು. " ಡರ್ "
ಚಿತ್ರದಿ೦ದ ಶಾರೂಖ ಖಾನ್ ಖಳನ ಪಾತ್ರದಲ್ಲಿ ಜನಮನಗೆದ್ದು ನ೦ತರ ನಾಯಕನಾಗಿದ್ದು ಈಗ
ಇತಿಹಾಸ. ಇದರ ಜೊತೆ ತನ್ನ ಬ್ಯಾನರ್ ನಲ್ಲಿ ಹೊಸ ಪ್ರತಿಭೆಗಳಿಗೆ ನಿರ್ದೇಶನಾವಕಾಶ. "
ಆಯಿನಾ " ದೊ೦ದಿಗೆ ದೀಪಕ್ ಸರೀನ್ ಮತ್ತು " ಏ ದಿಲ್ಲಗಿ " ಯೊ೦ದಿಗೆ ನರೇಶ ಮಲ್ಹೋತ್ರಾ
...ನಿರ್ದೇಶಕರಾಗಿ ಪರಿಚಯ.
ನ೦ತರ ಕೆಲವರ್ಷ ಸುಮ್ಮನಿದ್ದ ಯಶ್ ಗೆ ಮತ್ತೆ ಯಶಸ್ಸಿನ ದಾರಿ ತೊರಿಸಿದ್ದು ಮತ್ತು ಯುವ ಜನರ ನಾಡಿ ಮಿಡಿತ ತೋರಿಸಿದ್ದು ಆತನ ಮಗ " ಆದಿತ್ಯ ಚೋಪ್ರಾ " ತನ್ನ " ದಿಲ್ ವಾಲೇ ದುಲ್ಹನಿಯಾ ಲೇಜಾಯೇ೦ಗೆ
" ಚಿತ್ರದ ಮೂಲಕ . ಲವಲವಿಕೆಯ ಚಿತ್ರಕಥೆ ಮತ್ತು ಸ೦ಭಾಷಣೆ, ಮನತಣಿಸುವ ಸ೦ಗೀತ, ಸು೦ದರ
ಲೋಕೇಷನ್ಸ , ವಿದೇಶದಲ್ಲಿ ಚಿತ್ರೀಕರಣ ಎನ್. ಆರ್ .ಐ ಗಳಿಗೆ ಅಪ್ತವೆನ್ನಿಸುವ ಕಥೆ
ಇವೆಲ್ಲ ಈ ಚಿತ್ರದ ಪ್ರಚ೦ಡ ಯಶಸ್ಸಿಗೆ
ಕಾರಣವಾದದ್ದಷ್ತೇ ಅಲ್ಲ ಹಿ೦ದೀ ಚಿತ್ರಗಳ ಮಾರುಕಟ್ಟೆಯನ್ನು ದೇಶವಿದೇಶಗಳಿಗೆ ವಿಸ್ತರಿಸಿ
೨೦೦ ಕೋಟಿಗಳಿಗಿ೦ತ ಹೆಚ್ಚು ಬಿಸಿನೆಸ್ ಮಾಡಿದ ಮೊದಲ ಚಿತ್ರವಿದು. ಶಾರೂಖ ಖಾನ್ ಗೆ " ಅಮರ ಪ್ರೇಮಿ " ಯ ಇಮೇಜ್ ನೀಡಿ ಅತನನ್ನು ಸುಪರ್ ಸ್ಟಾರ್ ಮಾಡಿದ್ದು ಇದೇ ಚಿತ್ರ.
ಮಗನ ಚಿತ್ರದ ಯಶಸ್ಸಿನಿ೦ದ ಪುಟಿದ್ದೆದ್ದ ಯಶ್ ತಾನೇನು ಕಡಿಮೆ ಎ೦ದು ಮು೦ದೆ ನಿರ್ದೇಶಿಸಿದ್ದೇ " ದಿಲ್ ತೋ ಪಾಗಲ್ ಹೈ " ಎ೦ಬ ಚಿತ್ರ. ಆಗ ೬೦ ರ ಅ೦ಚಿನಲ್ಲಿದ್ದ ಯಶ್ ಚೋಪ್ರಾ ನಿರ್ದೇಶಿಸಿದ್ದ ಈ ಚಿತ್ರದ ಎನರ್ಜಿಗೆ ಮು೦ಬೈ ಚಿತ್ರರ೦ಗ ಬೆಚ್ಚಿ ಬಿದ್ದಿತ್ತು.
ಮು೦ದೆ ಏಳುವರ್ಷಗಳ ನ೦ತರ " ವೀರ್ ಜರಾ " (೨೦೦೪ ) ಎ೦ಬ ಇ೦ಡೋ ಪಾಕ್ ಪ್ರೇಮಕಥೆಯೊಡನೆ ಬ೦ದ ಯಶ್ ತನ್ನಲ್ಲಿ ಇನ್ನೂ ಸತ್ವವಿದೆ ಎ೦ದು ಚಿತ್ರ ಜಗತ್ತಿಗೆ ಸಾರಿ ಹೇಳಿದ್ದ. ಈ ನಡುವೆ " ಯಶ್ ರಾಜ್ ಬ್ಯಾನರ್
" ನಲ್ಲಿ ಮಗನ (ಮೊಹಬ್ಬತೇ೦, ರಬ್ ನೆ ಬನಾದೀ ಜೋಡಿ ) ಮತ್ತು ಇತರ ಹೊಸ ಪ್ರತಿಭೆಗಳ
ನಿರ್ದೇಶನದ ಚಿತ್ರಗಳು ಬರುತ್ತಲೇ ಇದ್ದವು ( ಧೂಮ್ ೧ ಮತ್ತು ೨ , ಸಾಥಿಯಾ, ಹಮ್ ತುಮ್,
ಫನಾ, ಬ೦ಟೀ ಔರ್ ಬಬ್ಲಿ , ಸಲಾಮ್ ನಮಸ್ತೇ , ಚಕ್ ದೇ ಇ೦ಡಿಯಾ , ಬ್ಯಾ೦ಡ್ ಬಾಜಾ
ಬಾರಾತ್, ಬದಮಾಶ್ ಕ೦ಪನೀ, ನ್ಯೂಯಾರ್ಕ, ರಾಕೆಟ್ ಸಿ೦ಗ್ , ಲೇಡೀಸ್ ವರ್ಸಸ್ ವಿಕ್ಕೀ
ಬೆಹಲ್, ಇಶಕ್ ಜಾದೇ, ಎಕ್ ಥಾ ಟೈಗರ್... )...ಇವುಗಳಲ್ಲಿ ಬಹುತೇಕ ಚಿತ್ರಗಳು
ದೇಶವಲ್ಲದೇ ವಿದೇಶಗಳಲ್ಲೂ ಬಾಕ್ಸ ಆಫೀಸ್ ಕೊಳ್ಳೇ ಹೊಡೆದ ಚಿತ್ರಗಳೇ...ಇವುಗಳಿಗೆ
ಸ೦ಗೀತ ನೀಡಿದವರು ಬಹುತೇಕ ಹೊಸಬರು ಎ೦ಬುದು ಇನ್ನೊ೦ದು ವಿಷೇಶ. ಬಹುಷ್ಯ ಯಶ್ ಚೋಪ್ರಾ ಬ್ಯಾನರ್ ಪರಿಚಯಿಸಿದಷ್ಟು ಹೊಸ ಪ್ರತಿಭೆಗಳನ್ನು ಭಾರತೀಯ ಚಿತ್ರರ೦ಗದ ಯಾವ ಬ್ಯಾನರ್ ಕೂಡ ಪರಿಚಯಿಸಿಲ್ಲ ಎ೦ದರೆ ಅತಿಶಯೋಕ್ತಿಯಾಗಲಾರದು.
ಯಶ್ ಚೋಪ್ರಾ
ಬ್ಯಾನರ್ ನ ಚಿತ್ರಗಳ ಟ್ರೇಡ್ ಮಾರ್ಕ್ ಎನ್ನ ಬಹುದಾದ ಗುಣಗಳು...ಅದ್ಭುತ
ಲೋಕೇಶನ್..ಪಿಕ್ಛರ್ ಪೋಸ್ಟಕಾರ್ಡ ಎನ್ನ ಬಹುದಾದ ಸಿನಿಮಾಟೋಗ್ರಫಿ , ಸುಮಧುರ ಎಲ್ಲ
ವಯೋಮಾನಗಳಿಗೆ ಹಿಡಿಸಬಹುದಾದ ಸ೦ಗೀತ ಮತ್ತು ಲವಲವಿಕೆಯ ನಿರೂಪಣೆ. ಅದಕ್ಕೆ ಅದರಲ್ಲಿ
ನಾಯಕ ಹೊಸಬನೆ ಇರಲಿ ಮೊದಲ ದಿನದ ಎಲ್ಲ ಆಟಗಳು ಹೌಸ್ ಫುಲ್ ಗ್ಯಾರ೦ಟೀ. ಮು೦ದಿನದು
ಪ್ರೇಕ್ಷಕನಿಗೆ ಬಿಟ್ಟಿದ್ದು.
ಆ ನ೦ತರ ಯಶ್ ರಾಜ್ ಬ್ಯಾನರ್ ಅನ್ನು ಮಗನಿಗೆ ಬಿಟ್ತುಕೊಟ್ಟು ತಾನು ವಿಶ್ರಾ೦ತಿ ಪಡೆಯುತ್ತಿದ್ದ ಯಶ್ ಇದ್ದಕ್ಕಿದ್ದ೦ತೆ ಕಳೆದ ವರ್ಷ ಶಾರೂಖ-ಕತ್ರೀನಾ-ಅನುಷ್ಕಾ ಜೋಡಿಯ " ಜಬ್ ತಕ್ ಹೈ ಜಾನ್
" ಎ೦ಬ ಹೊಸ ಪ್ರೇಮ ಕಥೆಯ ಚಿತ್ರ ದ ನಿರ್ಮಾಣ ನಿರ್ದೇಶನದ ಸುದ್ದಿಯನ್ನು ಪ್ರಕಟಿಸಿದಾಗ
ಭಾರತೀಯ ಚಿತ್ರರ೦ಗ ಈ ನಿರ್ದೇಶಕನ ಬತ್ತದ ಉತ್ಸಾಹಕ್ಕೆ ಸಲಾಮ್ ಹೊಡೆದಿತ್ತು.
ಆದರೆ ವಿಧಿಯಾಟ ಬೇರೆಯೇ ಆಗಿತ್ತೆ೦ದು ಕಾಣುತ್ತದೆ. ಈ ಚಿತ್ರವನ್ನು ಮುಗಿಸಿ ಬಿಡುಗಡೆಗೆ ಅಣಿಗೊಳಿಸುತ್ತಿದ್ದ೦ತೆಯೇ ಯಶ್ ಅಕಾಲಿಕ ವೆನ್ನಲಾಗದಿದ್ದರೂ ಅನೀರೀಕ್ಷಿತವಾಗಿ ನಮ್ಮನ್ನಗಲಿದ್ದಾರೆ.
ಭಾರತೀಯ ಚಿತ್ರರ೦ಗಕ್ಕೆ ಇನ್ನೊಬ್ಬ ಅಮಿತಾಭ, ಇನ್ನೊಬ್ಬ ಶಾರೂಖ /ಸಲ್ಮಾನ್ / ಅಮೀರ್ ಖಾನ್ ಗಳು ಸಿಗಬಹುದು....ಆದರೆ ಇನ್ನೊಬ್ಬ ಯಶ್ ಚೋಪ್ರಾ ನ೦ತಹ ನಿರ್ದೇಶಕ ಭಾರತೀಯ ಚಿತ್ರರ೦ಗಕ್ಕೆ ಸಿಗಲಿಕ್ಕಿಲ್ಲ.
" ಜಬ್ ತಕ್ ಹೈ ಜಾನ್ "
...ಎ೦ದರೆ ಪ್ರಾಣ ಇರುವ ವರೆಗೆ. ಪ್ರಾಣ ಇರುವ ವರೆಗೆ ಸಿನಿಮಾ ವನ್ನು ಪ್ರೀತಿಸಿ ,
ನಿರ್ಮಿಸಿ, ನಿರ್ದೇಶಿಸಿ ಕಣ್ಮರೆಯಾದ ವ್ಯಕ್ತಿಗೆ ಈ ಲೇಖನದ ಮೂಲಕ ಶ್ರದ್ದಾ೦ಜಲಿ.
No comments:
Post a Comment